×
Ad

ಪುತ್ತಿಗೆ ಪರ್ಯಾಯಕ್ಕೆ ಪೂರ್ವಭಾವಿ ಧಾನ್ಯ ಮುಹೂರ್ತ

Update: 2023-12-06 20:32 IST

ಉಡುಪಿ, ಡಿ.6: ಮುಂದಿನ ಜನವರಿ 18ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಶ್ರೀಕೃಷ್ಣ ಪೂಜಾ ಕೈಂಕರ್ಯದ ದ್ವೈವಾರ್ಷಿಕ ಪರ್ಯಾಯದಲ್ಲಿ ಸರ್ವಜ್ಡ ಪೀಠವನ್ನೇರುವ ಉಡುಪಿ ಅಷ್ಟಮಠ ಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ಚತುರ್ಥ ಪರ್ಯಾಯದ ಪೂರ್ವಭಾವಿ ನಾಲ್ಕನೇ ಹಾಗೂ ಕೊನೆಯ ಮುಹೂರ್ತವಾದ ಧಾನ್ಯ ಮುಹೂರ್ತ ಇಂದು ರಥಬೀದಿಯಲ್ಲಿರುವ ಪುತ್ತಿಗೆ ಮಠದಲ್ಲಿ ನೆರವೇರಿತು.

ಪರ್ಯಾಯ ಪೂರ್ವಭಾವಿ ಮುಹೂರ್ತಗಳಲ್ಲಿ ಈಗಾಗಲೇ ಬಾಳೆ, ಅಕ್ಕಿ ಹಾಗೂ ಕಟ್ಟಿಗೆ ಮುಹೂರ್ತಗಳು ನಡೆದಿದ್ದು, ಇದೀಗ ಕೊನೆಯ ಧಾನ್ಯ ಮುಹೂರ್ತವೂ ನಡೆದಿದೆ. ಇನ್ನು ದೇಶ ಸಂಚಾರದ ಬಳಿಕ ಮುಂದಿನ ಜ.8ರಂದು ಪುತ್ತಿಗೆ ಶ್ರೀಗಳು ತಮ್ಮ ಶಿಷ್ಯ ಶ್ರೀಸುಶ್ರೀಂದ್ರತೀರ್ಥರ ಜೊತೆಗೂಡಿ ಉಡುಪಿ ಪುರಪ್ರವೇಶ ಮಾಡಲಿದ್ದಾರೆ.

ಧಾನ್ಯ ಮುಹೂರ್ತದ ಅಂಗವಾಗಿ ಪುತ್ತಿಗೆ ಮಠದ ವಿಠಲ ದೇವರಿಗೆ ಬೆಳಗ್ಗಿನ ಮಹಾಪೂಜೆ ಸಲ್ಲಿಸಿ, ದೇವತಾ ಪ್ರಾರ್ಥನೆ ನೆರವೇರಿಸಿದ ಬಳಿಕ ಮೆರವಣಿಗೆಯಲ್ಲಿ ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ, ಗರುಢ, ಮಧ್ವ, ಸರ್ವಜ್ಞ ಸಿಂಹಾಸನ, ಭೋಜನ ಶಾಲೆ ಪ್ರಾಣ ದೇವರು, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನ, ಗೋ ಶಾಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

ಪುತ್ತಿಗೆ ಮಠಕ್ಕೆ ಮರಳಿ ಬಂದು ತಲೆ ಹೊರೆಯಲ್ಲಿ ಧಾನ್ಯ ಮುಡಿ, ಸ್ವರ್ಣ ಪಲ್ಲಕ್ಕಿಯಲ್ಲಿ ಕಿರು ಮುಡಿಯಿಟ್ಟು ರಥಬೀದಿಯಲ್ಲಿ ಮೆರವಣಿಗೆ ಬಳಿಕ ಶ್ರೀಕೃಷ್ಣಮಠದ ಬಡಗುಮಾಳಿಗೆಯ ಗದ್ದುಗೆಯಲ್ಲಿ ನಾಲ್ಕು ಮುಡಿಗಳ ಮೇಲೆ ಕಿರು ಮುಡಿಯಿಟ್ಟು ಪೂಜೆ ಸಲ್ಲಿಸಲಾಯಿತು. ಅಲ್ಲಿ ವಿವಿಧ ಮಠ, ಉಪ ಮಠಗಳ ಪ್ರತಿನಿಧಿಗಳು, ವಿದ್ವಾಂಸರಿಗೆ ಗೌರವ, ನವಗ್ರಹ ದಾನ ನೀಡಿದ ಬಳಿಕ ಮರಳಿ ಪುತ್ತಿಗೆ ಮಠಕ್ಕೆ ಬಂದು ವಿಠಲ ದೇವರಿಗೆ ಪೂಜೆ ಸಲ್ಲಿಸಲಾಯಿತು. ಧಾನ್ಯ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳು ರಾಘವೇಂದ್ರ ಕೊಡಂಚ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಭುವನಾಭಿರಾಮ ಉಡುಪ, ಹರಿಕೃಷ್ಣ ಪುನರೂರು, ಜಯಕರ ಶೆಟ್ಟಿ, ರಂಜನ್ ಕಲ್ಕೂರ, ಬಿ. ಗೋಪಾಲಾ ಚಾರ್ಯ, ಮುರಳೀಧರ ಆಚಾರ್ಯ, ಪ್ರಸನ್ನ ಆಚಾರ್ಯ, ಮಂಜುನಾಥ ಉಪಾಧ್ಯ, ಶ್ರೀನಾಗೇಶ್ ಹೆಗ್ಡೆ, ವಿ.ಜಿ.ಶೆಟ್ಟಿ, ಕೆ.ಉದಯಕುಮಾರ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ದಿನೇಶ್ ಪುತ್ರನ್, ಸುಬ್ರಹ್ಮಣ್ಯ ಉಪಾಧ್ಯ, ರಾಘವೇಂದ್ರ ಭಟ್, ಮಧ್ವರಮಣ ಆಚಾರ್ಯ, ರಾಘವೇಂದ್ರ ತಂತ್ರಿ, ಶ್ರೀಧರ ಉಪಾಧ್ಯ, ವಿದ್ವಾನ್ ಹೆರ್ಗ ಹರಿಪ್ರಸಾದ್ ಉಪಸ್ಥಿತರಿದ್ದರು.

ಕಟ್ಟಿಗೆ ರಥಕ್ಕೆ ಶಿಖರ

ಶ್ರೀಕೃಷ್ಣ ಮಠದ ಮಧ್ವಸರೋವರದ ಬಳಿ ಮೂರನೇ ಮುಹೂರ್ತದಲ್ಲಿ ಪ್ರಾರಂಭಿಸಿದ ಕಟ್ಟಿಗೆ ರಥದ ನಿರ್ಮಾಣ ಇದೀಗ ಪೂರ್ಣಗೊಂಡಿದ್ದು, ಇಂದು ಧಾನ್ಯ ಮುಹೂರ್ತದ ಸಮಯದಲ್ಲಿ ಅದಕ್ಕೆ ಶಿಖರ ಇರಿಸಲಾಯಿತು.

ಶ್ರೀಕೃಷ್ಣ ಮಠದ ಮೇಸ್ತ್ರಿ ಅವರು ಕಟ್ಟಿಗೆ ರಥದ ತುದಿಗೆ ಏರಿ ಈ ಕಲಶ ಇರಿಸಿದರು. ಈ ಕಟ್ಟಿಗೆಯನ್ನು ಪುತ್ತಿಗೆ ಪರ್ಯಾ ಯದ ಎರಡು ವರ್ಷಗಳ ಅವಧಿಗೆ ಅನ್ನದಾಸೋಹಕ್ಕೆ ಬಳಸಲಾಗುತ್ತದೆ.

ಏನಿದು ಧಾನ್ಯ ಮುಹೂರ್ತ?: ಮುಂದಿನ ಜ.18ರಿಂದ ಎರಡು ವರ್ಷಗಳ ಕಾಲ ನಡೆಯುವ ಪುತ್ತಿಗೆ ಪರ್ಯಾಯಕ್ಕೆ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗಾಗಿ ಧಾನ್ಯ ಸಂಗ್ರಹವೇ ಈ ಮುಹೂರ್ತದ ಹಿಂದಿನ ಉದ್ದೇಶವಾಗಿದೆ.


 








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News