ಸರಳೇಬೆಟ್ಟು ಪರಿಸರದಲ್ಲಿ ಚಿರತೆ ಹಾವಳಿ: ಸ್ಥಳೀಯರಲ್ಲಿ ಆತಂಕ
Update: 2023-12-16 20:13 IST
ಉಡುಪಿ, ಡಿ.16: ಮಣಿಪಾಲ ಸರಳಬೆಟ್ಟುವಿನ ಕೊಡಂಗೆ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಚಿರತೆ ಹಾವಳಿ ಕಂಡುಬಂದಿದ್ದು, ಸ್ಥಳೀಯರ ಸಾಕುನಾಯಿ ಯನ್ನು ಚಿರತೆ ಹೊತ್ತೊಯ್ದಿರುವ ಬಗ್ಗೆ ವರದಿಯಾಗಿದೆ.
ಲೀಲಾ ಶೆಟ್ಟಿ ಎಂಬವರ ಮನೆಯ ಅಂಗಳದಲ್ಲಿದ್ದ ಸಾಕು ನಾಯಿಯನ್ನು ಮಧ್ಯರಾತ್ರಿ ಚಿರತೆಯು ಹೊತ್ತುಕೊಂಡು ಹೋಗಿರುವುದು ತಿಳಿದುಬಂದಿದೆ. ಅದೇ ರೀತಿ ಅಲ್ಲೇ ಸಮೀಪದ ಸದಾನಂದ ಎಂಬವರ ಮನೆಯ ಎರಡು ನಾಯಿ ಗಳ ಮೇಲೆ ದಾಳಿ ನಡೆಸಿದ ಚಿರತೆ ಎತ್ತಿಕೊಂಡು ಹೋಗಿದೆ.
ಕಳೆದ ಎಂಟು ತಿಂಗಳ ಹಿಂದೆ ಹೆರ್ಗ ಸಮೀಪ ಕೋಣವೊಂದರ ಮೇಲೂ ಚಿರತೆ ದಾಳಿ ನಡೆಸಿತ್ತು. ಇದೀಗ ಮತ್ತೆ ಈ ಪರಿಸರದಲ್ಲಿ ಚಿರತೆ ಕಾಣಿಸಿ ಕೊಂಡಿರುವುದರಿಂದ ಸ್ಥಳೀಯರಲ್ಲಿ ಭೀತಿ ಆವರಿಸಿದೆ. ಆದುದರಿಂದ ಸಂಬಂಧ ಪಟ್ಟ ಅರಣ್ಯಇಲಾಖೆ ಸೂಕ್ತ ಜಾಗದಲ್ಲಿ ಬೋನುಗಳನ್ನು ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರಾದ ಮೋಹನ್‌ದಾಸ್ ನಾಯಕ್, ಗಣೇಶ್‌ರಾಜ್ ಸರಳೇಬೆಟ್ಟು ಒತ್ತಾಯಿಸಿದ್ದಾರೆ.