ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡೀಸ್ ಹೆಸರಿಡಲು ಆಗ್ರಹ
ಉಡುಪಿ, ಡಿ.16: ಮಂಗಳೂರು - ಮುಂಬೈ ನಡುವಣ ಸಂಚಾರಕ್ಕೆ ವರದಾನವಾಗಿರುವ ಕೊಂಕಣ ರೈಲ್ವೆಯ ಕನಸನ್ನು ಸಾಕಾರಗೊಳಿಸಿದ ತುಳುನಾಡಿನ ಅಭಿವೃದ್ಧಿ ಹರಿಕಾರ, ಮಾಜಿ ಕೇಂದ್ರ ಸಚಿವ, ದೇಶದ ಕಾರ್ಮಿಕರ ಕಣ್ಮಣಿ ಜಾರ್ಜ್ ಫೆರ್ನಾಂಡೀಸ್ ಅವರ ಹೆಸರನ್ನು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಇರಿಸುವಂತೆ ಮುಂಬೈಯ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಅವರು ಈ ಬಗ್ಗೆ ಸಮಿತಿ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ರಾಜನಾಥ್ ಸಿಂಗ್‌ರಿಗೆ ಪತ್ರ ಬರೆದು ಒತ್ತಾಯಿಸಿದೆ ಎಂದರು.
ಮೂಲತ: ಕರಾವಳಿಯವರಾಗಿ, ರಾಷ್ಟ್ರಮಟ್ಟದಲ್ಲಿ ಮಿಂಚಿರುವ, ಸಮಗ್ರ ಭಾರತೀಯರ ಕಣ್ಣಣಿಯಾಗಿ ಶೋಭಿಸುತ್ತಿರುವ ಜಾರ್ಜ್ ಫೆರ್ನಾಂಡೀಸ್ ಅವರೊಬ್ಬ ಸರಳ, ನಿರಾಡಂಬರ, ಪಾರದರ್ಶಕ ರಾಜಕಾರಣಿಯಾಗಿದ್ದವರು. ಅವರ ಸೇವೆಯನ್ನು ಗುರುತಿಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದು ಅತ್ಯಂತ ಸೂಕ್ತ ಎಂದು ಜಯಕೃಷ್ಣ ಶೆಟ್ಟಿ ತಿಳಿಸಿದರು.
ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್‌ಪ್ರಕಾಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.