ಬಿಜೆಪಿ ಕರ್ಮಕಾಂಡಗಳ ವಿರುದ್ಧ ಜನಜಾಗೃತಿ ಆಂದೋಲನ: ಅಶೋಕ್ ಕೊಡವೂರು
ಉಡುಪಿ: ಸರಕಾರದಿಂದ ಪಡೆದ 1200 ಎಕರೆ ಜಮೀನನ್ನು ಪಡುಬಿದ್ರಿಯಲ್ಲಿರುವ ಸುಜ್ಲಾನ್ ಕಂಪೆನಿ ಈಗ ನಷ್ಟ ಹೊಂದಿದ್ದು, ಈ ಸ್ಥಳವನ್ನು ಸರಕಾರಕ್ಕೆ ಹಿಂದಿರುಗಿಸದೇ ಖಾಸಗಿ ವ್ಯಕ್ತಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿದ ಅಕ್ರಮ, ಅವ್ಯವಹಾರದ ವಿರುದ್ಧ ಇದೇ ಡಿ.23ರಂದು ಕಂಪೆನಿ ಎದುರು ಬೃಹತ್ ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಬ್ರಹ್ಮಗಿರಿಯ ನಾಯರ್‌ಕೆರೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಜರಗಿದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಡಿ.26ರಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಬೈಂದೂರು ಕ್ಷೇತ್ರದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿ ಜನಸಾಮಾನ್ಯರ ಕೂಗಿಗೆ ಕಾಂಗ್ರೆಸ್ ಸದಾ ಸ್ಪಂಧಿಸು ತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಹಿಂದೂಗಳ ಭಾವನೆ ಗಳಿಗೆ ಧಕ್ಕೆಯಾದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಗರಣ ಹಾಗೂ ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಾದ ಅವ್ಯವಹಾರ ಪ್ರಕರಣವು ತನಿಖಾ ಹಂತದಲ್ಲಿದೆ. ಈಗ ಸುಜ್ಲಾನ್ ಕಂಪೆನಿಯ ಭೂ ಅವ್ಯವಹಾರದ ಬಗ್ಗೆ ಬೃಹತ್ ಜನಾಂದೋಲ ಹಮ್ಮಿಕೊಳ್ಳಲಾಗುತ್ತಿದೆ. ಬಿಜೆಪಿಯ ಈ ಎಲ್ಲಾ ಕರ್ಮಕಾಂಡಗಳ ವಿರುದ್ಧ ಜನಜಾಗೃತಿ ಉಂಟು ಮಾಡಲು ಈ ಜನಾಂದೋಲವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪಕ್ಷದ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್ ಅವರು ಮಾತನಾಡಿ, ಮುಂಬರುವ ನಗರಸಭೆಯ ಪೆರಂಪಳ್ಳಿ ವಾರ್ಡಿನ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತೆಯಾಗಿರುವ ಶ್ರುತಿ ಅವರನ್ನು ಆಯ್ಕೆ ಮಾಡಿದ್ದು, ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲಾ ಕಾರ್ಯಕರ್ತರು ಶ್ರಮಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೆರೋನಿಕಾ ಕರ್ನೇಲಿಯೊ, ವಾಸುದೇವ ಯಡಿಯಾಳ, ದಿನೇಶ್ ಪುತ್ರನ್, ಬಿ.ನರಸಿಂಹ ಮೂರ್ತಿ, ಮಹಾಬಲ ಕುಂದರ್, ಬಿಪಿನ್ ಚಂದ್ರಪಾಲ್ ನಕ್ರೆ, ಹರೀಶ್ ಕಿಣಿ, ಕೀರ್ತಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಹಿರಿಯಣ್ಣ,ಮುರಲಿಶೆಟ್ಟಿ, ಡಾ.ಸುನಿತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವರಾ, ರಮೇಶ್ ಕಾಂಚನ್, ಸದಾಶಿವ ದೇವಾಡಿಗ, ನೀರೆ ಕೃಷ್ಣ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಶಶಿಧರ್ ಶೆಟ್ಟಿ ಎಲ್ಲೂರು, ರೋಶನ್ ಶೆಟ್ಟಿ, ಕಿರಣ್ ಹೆಗ್ಡೆ, ಬಾಲಕೃಷ್ಣ ಪೂಜಾರಿ, ಅಬ್ದುಲ್ ಅಝೀಝ್, ಸುರೇಶ್ ಎಟ್ಟಿ ಬನ್ನಂಜೆ, ಗಣೇಶ ನೆರ್ಗಿ, ಉದ್ಯಾವರ ನಾಗೇಶ್ ಕುಮಾರ್, ವಿಶ್ವಾಸ್ ಅಮೀನ್, ಸತೀಶ್ ಕೊಡವೂರು ಸೌರಭ ಬಲ್ಲಾಳ್, ಲೂಯಿಸ್ ಲೋಬೊ, ಸುಲೋಚನಾ ದಾಮೋದರ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕುಶಲ ಶೆಟ್ಟಿ ಸ್ವಾಗತಿಸಿದರೆ, ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ವಂದಿಸಿದರು. ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.