ಹೋಟೆಲ್, ಫಾಸ್ಟ್‌ಫುಡ್ ಅಂಗಡಿಗಳಲ್ಲಿ ಹಾನಿಕಾರಕ ಬಣ್ಣ, ರಾಸಾಯನಿಕ ಬಳಸದಂತೆ ಸೂಚನೆ
ಉಡುಪಿ : ಜಿಲ್ಲೆಯ ಹೊಟೇಲ್ ಮಾಲಕರು ಹಾಗೂ ಫಾಸ್ಟ್ ಫುಡ್ ಅಂಗಡಿಯವರು ತಮ್ಮ ಉದ್ಯಮದಲ್ಲಿ ಹಾನಿಕಾರಕ ಬಣ್ಣ, ಟೇಸ್ಟಿಂಗ್ ಪೌಡರ್, ರಾಸಾಯನಿಕ ಹಾಗೂ ಪೇಪರ್ ಪ್ಲೇಟ್, ಪೇಪರ್ ಗ್ಲಾಸ್ ಮತ್ತು ಟಿಶ್ಯೂ ಪೇಪರ್‌ಗಳನ್ನು ಬಳಸದೇ ಮರುಬಳಕೆಯ ವಸ್ತುಗಳಾದ ಸ್ಟೀಲ್ ಲೋಟ, ಸ್ಟೀಲ್ ತಟ್ಟೆಗಳನ್ನು ಕಡ್ಡಾಯವಾಗಿ ಬಳಸಿ ತ್ಯಾಜ್ಯವನ್ನು ಕಡಿಮೆ ಮಾಡುವಂತೆ ಉಡುಪಿ ನಗರಸಭಾ ಪೌರಾಯುಕ್ತರು ಸೂಚನೆ ನೀಡಿದ್ದಾರೆ.
ನಗರಸಭೆಯ ಪೌರಾಯುಕ್ತರು, ಪರಿಸರ ಅಭಿಯಂತರರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್ ವೈಸರ್‌ಗಳು ಹಾಗೂ ಪೌರ ಕಾರ್ಮಿಕರು ಈಗಾಗಲೇ ನಗರದ ಹಲವು ಕಡೆ ದಾಳಿ ನಡೆಸಿ, ಹಾನಿಕಾರಕ ಬಣ್ಣ, ಟೇಸ್ಟಿಂಗ್ ಪೌಡರ್‌ನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.
ಜನವರಿ 1ರ ನಂತರ ಯಾವುದೇ ಹೋಟೇಲ್, ಫಾಸ್ಟ್ ಫುಡ್ ಅಂಗಡಿ, ಮದುವೆ ಸಭೆ ಸಮಾರಂಭಗಳಲ್ಲಿ ಒಮ್ಮೆ ಬಳಸಿ ಬಿಸಾಡುವ ಪೇಪರ್ ಪ್ಲೇಟ್, ಕಪ್, ಗ್ಲಾಸ್ ಮತ್ತು ಟಿಶ್ಯೂಗಳನ್ನು ಬಳಸಬಾರದು. ಇವುಗಳ ಬಳಕೆ ಕಂಡುಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಿ, ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಉಡುಪಿ ನಗರವನ್ನು ಕಸಮುಕ್ತ ನಗರವನ್ನಾಗಿ ಮಾಡುವುದು, ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆ ಮಾಡಲು ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸುವಂತೆ ನಗರಸಭೆ ಪೌರಾಯು ಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.