ದೋಣಿಯಿಂದ ನದಿಗೆ ಬಿದ್ದು ಮೀನುಗಾರ ಮೃತ್ಯು
Update: 2023-12-18 20:13 IST
ಸಾಂದರ್ಭಿಕ ಚಿತ್ರ
ಬೈಂದೂರು, ಡಿ.18: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರರೊಬ್ಬರು ದೋಣಿಯಿಂದ ನದಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಉಪ್ಪುಂದ ಗ್ರಾಮದ ಓಲಗ ಮಂಟಪ ಬಳಿ ಡಿ.17ರಂದು ರಾತ್ರಿ 8.30ರ ಸುಮಾರಿಗೆ ನಡೆದಿದೆ.
ಮೃತರನ್ನು ಉಪ್ಪುಂದ ನಿವಾಸಿ ಮಾಧವ(56) ಎಂದು ಗುರುತಿಸಲಾಗಿದೆ. ಇವರು ನಟರಾಜ ಜೊತೆ ಸುಮನಾ ನದಿಗೆ ಏಡಿ ಹಿಡಿಯಲು ದೋಣಿಯಲ್ಲಿ ತೆರಳಿದ್ದು, ದೋಣಿಯಲ್ಲಿ ನಿಂತು ಏಡಿ ಹಿಡಿಯುತ್ತಿರುವ ವೇಳೆ ಮಾಧವ ದೋಣಿಯಿಂದ ಕುಸಿದು ನದಿಯ ನೀರಿಗೆ ಬಿದ್ದರೆನ್ನಲಾಗಿದೆ.
ಇವರನ್ನು ಕೂಡಲೇ ಇತರರು ಮೇಲಕ್ಕೆತ್ತಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ದಾರಿ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.