×
Ad

ಶಾಂತಿ ಇದ್ದಲ್ಲಿ ಮಾತ್ರ ಸಾಮರಸ್ಯ, ಸಹಬಾಳ್ವೆ ಸಾಧ್ಯ: ಬಿಷಪ್ ಜೆರಾಲ್ಡ್ ಲೋಬೊ

Update: 2023-12-19 18:23 IST

ಉಡುಪಿ : ಹಿಂಸೆಗೆ ಉತ್ತರವಾಗಿ ಪ್ರೀತಿಯನ್ನು ತಿಳಿಸಲು ಯೇಸು ಕ್ರಿಸ್ತರು ಧರೆಯಲ್ಲಿ ಹುಟ್ಟಿಬಂದರು. ಶಾಂತಿ ಇದ್ದಲ್ಲಿ ಮಾತ್ರ ಭಾವೈಕ್ಯತೆ ಸಾಮರಸ್ಯ, ಸಹಬಾಳ್ವೆ, ಸಮಾಧಾನ ಸಾಧ್ಯ. ಪ್ರತಿಯೊಬ್ಬರು ಶಾಂತಿಯ ದೂತರಾದಾಗ ಶಾಂತಿ ಹಾಗೂ ಪ್ರೀತಿಯ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹ ಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇಡೀ ಮನುಕುಲ ಜಾತಿ ಮತಗಳ ಬೇಧವಿಲ್ಲದೆ ಆಚರಿಸುವ ಹಬ್ಬ ಕ್ರಿಸ್ತ ಜಯಂತಿಯಾಗಿದ್ದು ಇದರ ಕೇಂದ್ರ ವ್ಯಕ್ತಿ ಯೇಸು ಕಂದರಾಗಿದ್ದಾರೆ. ಯೇಸು ಸ್ವಾಮಿ ಈ ಜಗತ್ತಿಗೆ ನೀಡಿದ ಕಾಣಿಕೆ ಶಾಂತಿ ಸಮಾಧಾನ. ಆದರೆ ಇಂದು ಸಮಾಜದಲ್ಲಿ ಅಶಾಂತಿ, ಅಸಮಾನತೆ, ಅನ್ಯಾಯ, ಬಡತನ, ನಿರುದ್ಯೋಗ, ಹಿಂಸೆ ಶೋಷಣೆ, ರೋಗರುಜಿ, ದ್ವೇಷ ಯುದ್ದ, ಅತ್ಯಾಚಾರ, ಮತಾಂದತೆ, ಪರಮತ ಅಸಹಿಷ್ಣುತೆ ಕಾಣುತ್ತಿದ್ದು ಇವುಗಳನ್ನು ಗೆಲ್ಲಲು ಪ್ರೀತಿಯಿಂದ ಮಾತ್ರ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಗೆಸ್ಟ್ ರಿಲೇಶನ್ ಮ್ಯಾನೇಜರ್ ರಾಘವೇಂದ್ರ ನಾಯಕ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಎಚ್., ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಶುಭ ಹಾರೈಸಿದರು. 2023ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹರೀಶ್ ಸುವರ್ಣ ಬಲಾಯಿಪಾದೆ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ಡಾ.ರೋಶನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಧರ್ಮಗುರುಗಳಾದ ವಂ.ವಲೇರಿಯನ್ ಮೆಂಡೊನ್ಸಾ, ವಂ.ಚಾರ್ಲ್ಸ್ ಮಿನೇಜಸ್, ಅನುಗ್ರಹ ಪಾಲನಾ ಕೇಂದ್ರದ ನಿರ್ದೇಶಕ ವಂ.ವಿನ್ಸೆಂಟ್ ಕ್ರಾಸ್ತಾ ಉಪಸ್ಥಿತರಿದ್ದರು.

ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಆಲ್ವಿನ್ ಸಿಕ್ವೇರಾ ಸ್ವಾಗತಿಸಿದರು. ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ವಂದಿಸಿದರು. ವಂ.ಸಿರಿಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News