×
Ad

ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣಗಳಿಲ್ಲ: ಡಿಎಚ್‌ಓ

Update: 2023-12-20 21:23 IST

ಫೈಲ್‌ ಫೋಟೊ 

ಉಡುಪಿ: ಜಿಲ್ಲೆಯಲ್ಲಿ ಸದ್ಯ ಯಾವುದೇ ಕೋವಿಡ್‌ನ ಸಕ್ರಿಯ ಪ್ರಕರಣಗಳು ಕಂಡುಬಂದಿಲ್ಲ. ರಾಜ್ಯ ಸರಕಾರದ ಸೂಚನೆಯಂತೆ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತಿದ್ದೇವೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗಡದ್ ತಿಳಿಸಿದ್ದಾರೆ.

ಸದ್ಯ ಶೀತ, ನೆಗಡಿ, ಕೆಮ್ಮು ಇರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಸದ್ಯ ದಿನದಲ್ಲಿ 8ರಿಂದ 10 ಮಂದಿಯ ಪರೀಕ್ಷೆ ನಡೆಯುತ್ತಿದೆ. ಸರಕಾರದ ಸೂಚನೆಯಂತೆ ಇದನ್ನು ಹೆಚ್ಚಿಸಲಾಗುವುದು. ಸದ್ಯಕ್ಕೆ ಯಾರಲ್ಲೂ ಕೋವಿಡ್-19ಕ್ಕೆ ಪಾಸಿಟಿವ್ ಕಂಡುಬಂದಿಲ್ಲ ಎಂದವರು ವಿವರಿಸಿದರು.

ಕೋವಿಡ್‌ಗೆ ಬೇಕಾದ ಔಷಧಿಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಬೆಡ್ ಹಾಗೂ ಐಸಿಯುಗಳನ್ನು ಸನ್ನದ್ಧವಾಗಿಸಿದ್ದೇವೆ. ಆಕ್ಸಿಜನ್ ಸಿಲಿಂಡರ್‌ಗಳನ್ನು ಸಹ ರೆಡಿಯಾಗಿರಿಸಿದ್ದೇವೆ. ಸರಕಾರದಿಂದ ಈ ಸಂಬಂಧ ಬರುವ ಎಲ್ಲಾ ಮಾರ್ಗಸೂಚಿ ಗಳನ್ನು ತಪ್ಪದೇ ಪಾಲಿಸಲಾಗುವುದು ಎಂದರು.

ಕೋವಿಡ್ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯಲ್ಲಿರುವ ಆರ್‌ಟಿಪಿಸಿಆರ್ ಪ್ರಯೋಗಾಲಯ ಸನ್ನದ್ಧ ಸ್ಥಿತಿಯಲ್ಲಿದೆ. ಅಲ್ಲೀಗ ಪರೀಕ್ಷೆಗೆ ಪಡೆದ ಸ್ಯಾಂಪಲ್‌ಗಳ ಪರೀಕ್ಷೆಯೂ ನಡೆಯುತ್ತಿದೆ. ಹಿಂದಿನ ಅನುಭವದಿಂದ ಕೋವಿಡ್-19ನ್ನು ಮತ್ತೆ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದರು.

ಕೋವಿಡ್‌ನ್ನು ಎದುರಿಸಲು ಜಿಲ್ಲೆಯ ಜನತೆಯೂ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಡಾ.ಗಡದ್, ಶೀತ, ಜ್ವರ, ಕೆಮ್ಮು ಇರುವವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದೇ ರೀತಿ 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹೆಚ್ಚು ಜಾಗೃತರಾಗಿದ್ದು, ಮಾಸ್ಕ್‌ಗಳನ್ನು ಬಳಸುವಂತೆ ಮನವಿ ಮಾಡಿದರು.

ಶಬರಿಮಲೆ ಯಾತ್ರಿಗಳ ಮೇಲೆ ನಿಗಾ

ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಶಬರಿಮಲೆಗೆ ಯಾತ್ರೆಗೆ ತೆರಳುವ ಹಾಗೂ ಅಲ್ಲಿಂದ ಮರಳುವ ಜಿಲ್ಲೆಯ ಯಾತ್ರಿಗಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಎಚ್‌ಓ ತಿಳಿಸಿದರು.

ಊರಿನಲ್ಲಿ ಶಬರಿಮಲೆ ಯಾತ್ರೆಗೆ ತೆರಳುವವರ ಮೇಲೆ ನಿಗಾ ವಹಿಸಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯ ಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News