ಗಂಗೊಳ್ಳಿ ಸಹಕಾರಿ ಸಂಘದಲ್ಲಿ ಎಸ್‌ಸಿ ಎಸ್‌ಟಿಗಳಿಗೆ ಎ ಶ್ರೇಣಿ ಸದಸ್ಯತ್ವ: ಸಭಾಪತಿಗೆ ಮನವಿ
ಕುಂದಾಪುರ, ಡಿ.22: ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದವರಿಗೆ ಎ ಶ್ರೇಣಿ ಸದಸ್ಯತ್ವ ನೀಡದೆ ಸಮಸ್ಯೆ ಮಾಡಲಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜೈಭೀಮ್ ನೀಲಪಡೆ ಪ್ರಧಾನ ಸಂಚಾಲಕ ಜಗದೀಶ್ ಗಂಗೊಳ್ಳಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದರು.
ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದವರಿಗೆ ಎ ಶ್ರೇಣಿಯ ಸದಸ್ಯತ್ವ ನೀಡದೆ ಬಿ ಶ್ರೇಣಿ ಸದಸ್ಯತ್ವ ನೀಡುವ ಮೂಲಕ ಸವಲತ್ತುಗಳನ್ನು ನಿರಾಕರಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿ ವೇತನ, ಸಾಲ ಸೌಲಭ್ಯ ಹಾಗೂ ಇತರ ಸವಲತ್ತು ಗಳನ್ನು ಸಹಕಾರ ಸಂಘದ ಮೂಲಕ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಆರ್ಥಿಕವಾಗಿ ಸ್ವಾವಲಂಭಿ ಜೀವನ ನಡೆಸಲು ಹಿನ್ನಡೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಸಮಸ್ಯೆ ಪರಿಹರಿಸಲು ಸಂಬಂದಪಟ್ಟವರಿಗೆ ಸೂಚಿಸಿ ಪ.ಜಾತಿ- ಪ.ಪಂಗಡದ ಮೀನುಗಾರರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಸಭಾಪತಿ, ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಅಗತ್ಯ ಕ್ರಮಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.