×
Ad

ಉಡುಪಿ: ತ್ಯಾಗ, ಪ್ರೀತಿಯ ಸಂದೇಶದೊಂದಿಗೆ ಕ್ರಿಸ್ಮಸ್ ಆಚರಣೆ

Update: 2023-12-25 18:03 IST

ಉಡುಪಿ: ಜಗತ್ತಿಗೆ ತ್ಯಾಗ ಮತ್ತು ಪ್ರೀತಿಯ ಸಂದೇಶ ಸಾರಿದ ಏಸುಕ್ರಿಸ್ತರ ಜನ್ಮದಿನ ಕ್ರಿಸ್ಮಸ್ ಹಬ್ಬವನ್ನು ಸೋಮವಾರ ಜಿಲ್ಲೆಯ ಕ್ರೈಸ್ತರು ಸಂಭ್ರಮ, ಸಡಗರದಿಂದ ಆಚರಿಸಿದರು.

ರವಿವಾರ ರಾತ್ರಿ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಬಲಿಪೂಜೆಯಲ್ಲಿ ಪಾಲ್ಗೊಂಡ ಕ್ರೈಸ್ತರು ಸೋಮವಾರ ತಮ್ಮ ಮನೆಗಳಲ್ಲಿ ಹಬ್ಬದ ಆಚರಣೆಯನ್ನು ಮಾಡಿದರು.

ಸೋಮವಾರ ಬೆಳಿಗ್ಗೆ ಎಲ್ಲಾ ಚರ್ಚುಗಳಲ್ಲಿ ಹಬ್ಬದ ಆಚರಣೆಯ ವಿಶೇಷ ಬಲಿಪೂಜೆಗಳು ಜರುಗಿದವು. ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಉಡುಪಿಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ ಹಬ್ಬದ ಸಂದೇಶ ನೀಡಿದರು.

ಕ್ರೈಸ್ತರ ಮನೆಗಳಲ್ಲಿ ಸೋಮವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೆರೆಮನೆಯವರು, ಬಂಧುಮಿತ್ರರೊಡಗೂಡಿ ಹಬ್ಬದ ಊಟವನ್ನು ಸವಿದರು. ಪರಸ್ಪರ ಕ್ರಿಸ್ಮಸ್ ಹಬ್ಬದ ವಿಶೇಷ ತಿಂಡಿ ಕುರ್ಸ್ವಾ, ಕೇಕ್ ಅನ್ನು ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.

ಐಸಿವೈಎಮ್ ಸಂಘಟನೆಯ ಸದಸ್ಯರು ಆಯಾ ಚರ್ಚುಗಳ ಮಕ್ಕಳಿಗಾಗಿ ಗೋದಲಿ ನಿರ್ಮಾಣ ಸ್ಪರ್ಧೆಯನ್ನು ಆಯೋಜಿ ಸಿದ್ದು ಇದಕ್ಕಾಗಿ ಮನೆಮನೆ ಗಳಿಗೆ ಭೇಟಿ ನೀಡಿ ಗೋದಲಿ ವೀಕ್ಷಣೆ ಮಾಡುವುದರೊಂದಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಗಳನ್ನು ವಿನಿಮಯ ಮಾಡಿಕೊಂಡರು.

ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದ ವಿಶೇಷ ಬಲಿಪೂಜೆಯನ್ನು ಚರ್ಚ್‌ಗಳಲ್ಲಿ ನಡೆಸಲಾಯಿತು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ ಬಲಿಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶ ನೀಡಿದರು.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಜಿಲ್ಲೆಯ ಎಲ್ಲಾ ಚರ್ಚುಗಳು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಹಾಗೂ ವೈವಿಧ್ಯ ಮಯ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಸುಮಾರು ಎರಡು ವರ್ಷಗಳ ಬಳಿಕ ಜಿಲ್ಲೆಯ ಪ್ರಮುಖ ಚರ್ಚ್‌ಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದವು.

ಕಳೆದ ರಾತ್ರಿಯ ಪೂಜೆ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು.

ಹಬ್ಬದ ಅಂಗವಾಗಿ ಚರ್ಚುಗಳಲ್ಲಿ ತಡ ರಾತ್ರಿಯವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಸಾಂತಾಕ್ಲಾಸ್ ವೇಷ, ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು. ಬಲಿಪೂಜೆಯ ಬಳಿಕ ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News