×
Ad

ಅಂತರಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಪುತ್ತೂರು ವಿವೇಕಾನಂದ ಕಾಲೇಜಿಗೆ ಚಾಂಪಿಯನ್ ಪ್ರಶಸ್ತಿ

Update: 2023-12-28 19:31 IST

ಉಡುಪಿ: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಅಂತರ ಕಾಲೇಜು ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವರ್ಣೋತ್ಸವ -2023ರಲ್ಲಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು.

ನಿಟ್ಟೆ ಎನ್.ಎಂ.ಎ.ಎಂ.ಐ.ಟಿ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾನಿಲಯವು ದ್ವಿತೀಯ ಸ್ಥಾನದೊಂದಿಗೆ ರನ್ನರ್ಸ್‌ ಅಪ್‌ಬಹುಮಾನ ಪಡೆದುಕೊಂಡಿತು. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಿದ್ದರು.

ಗುರುವಾರ ಕಾಲೇಜಿನ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿಶ್ವವಲ್ಲಭ ತೀರ್ಥ ಮಾತನಾಡಿ, ನಿಯಮಿತ ಪಠ್ಯಕ್ರಮವನ್ನು ಮೀರಿ ಇಂತಹ ಸಾಂಸ್ಕೃತಿಕ ತಾಂತ್ರಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ ಮತ್ತು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಜೀವನವನ್ನು ನಡೆಸುವುದು ಪ್ರತಿಯೊಬ್ಬ ವ್ಯಕ್ತಿಯ ಗುರಿಯಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಬೆಂಗಳೂರು ಇ ವೈ ಟ್ಯಾಲೆಂಟ್ ಎಕ್ವಿಸಿಶನ್‌ನ ಸಹನಿರ್ದೇಶಕ ವಿನಯ್ ವೈಷ್ಣವ್ ಮಾತನಾಡಿ ದರು. ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕ ಸವಿತಾ ಶೆಣೈ ಉಪಸ್ಥಿತರಿದ್ದರು.

ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯ ಜೆ.ಭಟ್ ಸ್ವಾಗತಿಸಿದರು. ಸವಿತಾ ಶೆಣೈ ವರದಿಯನ್ನು ವಾಚಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಬ್ಬಲಕ್ಷ್ಮೀ ಕಾರಂತ್ ಪರಿಚಯಿಸಿದರು. ಸಂಸ್ಥೆಯ ತಾಂತ್ರಿಕ ಕಾರ್ಯಕ್ರಮ ಗಳ ಸಂಯೋಜಕಿ ರೆನಿಟಾ ಶರೋನ್ ಮೋನಿಸ್ ಮತ್ತು ಅರುಣ್ ಉಪಧ್ಯಾಯ ವಿಜೇತರ ಪಟ್ಟಿಯನ್ನು ವಾಚಿಸಿದರು.

ಅದಿತಿ ನಾಯಕ್ ಮತ್ತು ಖುಷಿ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ದೀಪಿಕಾ ಬಿ.ವಿ. ವಂದಿಸಿದರು. ಬಳಿಕ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News