×
Ad

ವಿಕಸಿತ ಭಾರತ ಯೋಜನೆಗೆ ರಾಜ್ಯ ಸರಕಾರ ಅಸಹಕಾರ: ಕೋಟ ಶ್ರೀನಿವಾಸ ಪೂಜಾರಿ ಆರೋಪ

Update: 2024-01-06 21:02 IST

ಉಡುಪಿ, ಜ.6: ಕೇಂದ್ರ ಸರಕಾರದ ವಿಕಸಿತ ಭಾರತದ ಯೋಜನೆ ಗ್ರಾಪಂ ಮಟ್ಟದಲ್ಲಿ ಅನುಷ್ಠಾನಗೊಳ್ಳಲು ಕರ್ನಾಟಕ ಸರಕಾರ ಅಸಹಕಾರ ತೋರಿಸುತ್ತಿದೆ ಎಂದು ವಿಧಾನ ಪರಿಷತ್‌ನಲ್ಲಿ ವಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಯೋಜನೆ ಅನುಷ್ಠಾನ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಸಿಎಸ್ ಹೋಗಬಾರದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ಬಂದಿದೆ ಎಂದರು.

ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಿದ್ದೇನೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗವಹಿಸಲು ಅವಕಾಶ ಕೊಡಬೇಕು ಎಂದು ಅವರಲ್ಲಿ ವಿನಂತಿಸಿದ್ದೇನೆ ಎಂದರು.

ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾರೆ. ಕೇಂದ್ರ ಸರ್ಕಾರದ ಕಾರ್ಯ ಯೋಜನೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ. ಬರ ಪರಿಹಾರಕ್ಕೆ ಕೇಂದ್ರ ಸರಕಾರವನ್ನು ನಂಬಿಕೂತರೆ ಆಗುವುದಿಲ್ಲ. ಕೇಂದ್ರ ಕಾಲಕಾಲಕ್ಕೆ ಅನುದಾನ ಕೊಡುತ್ತದೆ. ರಾಜ್ಯ ಸರಕಾರ ಮೊದಲು ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದು ಕೋಟ ಹೇಳಿದರು.

ಸಿದ್ದರಾಮಯ್ಯನವರೇ 33,000 ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯದ 42 ಲಕ್ಷ ರೈತರಿಗೆ ಬರದ ಬಿಸಿ ತಟ್ಟಿದೆ ಎಂದಿದ್ದಾರೆ. ಮುಖ್ಯಮಂತ್ರಿ ಗಳೇ ಮೊದಲು 10 ಸಾವಿರ ಕೋಟಿ ಬಿಡುಗಡೆ ಮಾಡಿ. ಬೀಜಕ್ಕೆ ಗೊಬ್ಬರಕ್ಕೆ ಅನುದಾನ ಮಾಡಿಕೊಡಿ. ಆ ಬಳಿಕ ಒಟ್ಟಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸೋಣ ಎಂದರು.

ಒತ್ತಾಯ ಮಾಡುವುದು ಸಂಸದರ ಕೆಲಸ ಅಲ್ಲ. ಕೇಂದ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನ ಮಾಡುವುದು ಸಂಸದರ ಕೆಲಸ. ರಾಜ್ಯ ಸರ್ಕಾರ ನಮ್ಮ ಸಂಸದರ ಮೇಲೆ ಅಪಪ್ರಚಾರ ಮಾಡುತ್ತಿದೆ. ರಾಜ್ಯ ಸರ್ಕಾರದ ನಡವಳಿಕೆ ಸರಿ ಇಲ್ಲ ಎಂದು ನುಡಿದರು.

ರಾಜ್ಯದಲ್ಲಿ 4 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಆಗುತ್ತೆ 50,000 ಕೋಟಿ ಮಾತ್ರ ಕೊಡುತ್ತಾರೆ ಅನ್ನೋದು ಸಿದ್ದರಾಮಯ್ಯ ಹೇಳುತ್ತಿರುವ ಸುಳ್ಳು. ಮುಖ್ಯಮಂತ್ರಿಗಳೇ ರಾಜ್ಯದ ಜನತೆಗೆ ತಪ್ಪು ಮಾಹಿತಿ ಕೊಡಬೇಡಿ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಉಪಮುಖ್ಯಮಂತ್ರಿಯಾಗಿ ಡಿಕೆಶಿ ಇದ್ದಾರೆ. ಇನ್ನೂ ಮೂರು ಡಿಸಿಎಂ ಹುದ್ದೆ ಕೇಳ್ತಿ ದ್ದಾರೆ. ಹೆಚ್ಚು ಉಪ ಮುಖ್ಯಮಂತ್ರಿಗಳಾದರೆ ಆಡಳಿತ ಏನಾಗುತ್ತೆ ನೋಡೋಣ. ಮೂರು ಉಪ ಮುಖ್ಯಮಂತ್ರಿ ಹುದ್ದೆ ಚರ್ಚೆ ಕೂಡ ಒಳ ಜಗಳದ ಸ್ವರೂಪದಲ್ಲಿದ್ದು, ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ ಇದು ದೃಷ್ಟಾಂತ ಎಂದರು.

ರಾಜ್ಯ ಸರಕಾರ ಹೇಳುವುದು ಒಂದು ಮಾಡುವುದು ಇನ್ನೊಂದು ಎಂದ ಕೋಟ, ಸಿದ್ದರಾಮಯ್ಯ ಸರಕಾರ ಬರ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News