×
Ad

ತಿರುವನಂತಪುರಂ-ಕಾಸರಗೋಡು ವಂದೇಭಾರತ್ ರೈಲನ್ನು ಬೈಂದೂರುವರೆಗೆ ವಿಸ್ತರಿಸಲು ಶೋಭಾ ಕರಂದ್ಲಾಜೆ ಪತ್ರ

Update: 2024-01-11 21:10 IST

ಉಡುಪಿ: ಈಗ ತಿರುವನಂತಪುರಂ ಹಾಗೂ ಕಾಸರಗೋಡು ನಡುವೆ ಸಂಚರಿಸುವ ವಂದೇಭಾರತ್ ರೈಲನ್ನು ಕೊಲ್ಲೂರಿಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಬೈಂದೂರಿನ ಮೂಕಾಂಬಿಕಾ ರೋಡ್ ನಿಲ್ದಾಣದ ವರೆಗೆ ವಿಸ್ತರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ತಮ್ಮ ನೇತೃತ್ವದಲ್ಲಿ ಗುಜರಾತ್‌ನ ಗಾಂಧಿನಗರದಿಂದ ದಕ್ಷಿಣದ ಕೇರಳದ ತಿರುವನಂತಪುರಂವರೆಗೆ ಪಶ್ಚಿಮ ಕರಾವಳಿ ಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಾರಂಭಿಸಿದ್ದು, ಇದರಿಂದ ಗುಜರಾತ್‌ನಿಂದ ದಕ್ಷಿಣದ ಕನ್ಯಾಕುಮಾರಿವರೆಗೆ ಕೆಲವೇ ಗಂಟೆಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿರುವುದು ಸಂತೋಷದ ವಿಷಯ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಯ ಹಿನ್ನೆಲೆಯಲ್ಲಿ ತಿರುವನಂತಪುರಂ- ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಮೂಲಕ ಕೊಂಕಣ ರೈಲ್ವೆಯ ಬೈಂದೂರಿನ ಮೂಕಾಂಬಿಕಾ ರೋಡ್ ನಿಲ್ದಾಣದವರೆಗೆ ವಿಸ್ತರಿಸಬೇಕೆಂದು ಮನವಿ ಮಾಡುತ್ತೇನೆ. ಇದು ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರವಾದ ಕೊಲ್ಲೂರಿಗೆ ಸಮೀಪದಲ್ಲಿದೆ ಎಂದು ಶೋಭಾ ತಿಳಿಸಿದ್ದಾರೆ.

ಈ ವಿಸ್ತರಣೆಯಿಂದ ಕೇರಳದಿಂದ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನಕ್ಕೆ ಬರುವ ಭಾರೀ ಸಂಖ್ಯೆಯ ಭಕ್ತರಿಗೆ ನೇರವಾಗಿ ತೆರಳಲು ಸಾಧ್ಯವಾಗಲಿದೆ. ಅಲ್ಲದೇ ಉಡುಪಿಯ ಶ್ರೀಕೃಷ್ಣನ ದರ್ಶನವೂ ಸೇರಿದಂತೆ ಕರಾವಳಿಯ ಇತರ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲು ಸುಲಭವಾಗಲಿದೆ. ಇದರೊಂದಿಗೆ ಕರಾವಳಿ ಕರ್ನಾಟಕದ ಮಂದಿಗೆ ತಿರುವನಂತಪುರ ಹಾಗೂ ಕನ್ಯಾಕುಮಾರಿಯಂಥ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳಲೂ ಸುಲಭ ವಾಗಲಿದೆ ಎಂದು ಶೋಭಾ ರೈಲ್ವೆ ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News