ಶಿಕ್ಷಣದಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯ: ಜಯಮಾಲಾ
ಉಡುಪಿ, ಜ.19: ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಎಜ್ಯುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಮತ್ತು ಡಾ.ಟಿಎಂಎ ಪೈ ಫೌಂಡೇಶನ್ ವತಿಯಿಂದ ಶುಕ್ರವಾರ ಮಣಿಪಾಲ ಕೆಎಂಸಿ ಗ್ರೀನ್ಸ್‌ನಲ್ಲಿ ಹಮ್ಮಿಕೊಳ್ಳಲಾದ ಸಮಾರಂಭ ದಲ್ಲಿ ಐವರು ಸಾಧಕರಿಗೆ ಹೊಸ ವರ್ಷ ಪ್ರಶಸ್ತಿ -2024’ನ್ನು ಪ್ರದಾನ ಮಾಡಲಾಯಿತು.
ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ನರೇಂದ್ರ, ಚಿತ್ರನಟಿ ಡಾ.ಜಯಮಾಲಾ ರಾಮಚಂದ್ರ, ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್.ಮಂಜುನಾಥ ಹಂದೆ, ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಹಾಗೂ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ತಜ್ಞ ಡಾ.ಎಡ್ಕತೋಡಿ ಸಂಜೀವ ರೈ ಹಾಗೂ ಕೃಷಿಕ ಬಿ.ಕೆ.ದೇವರಾವ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟಿ ಜಯಮಾಲಾ, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತವರಿಗೆ ಸಂಬಂಧಿಸಿದ ನೆನಪೇ ಅತ್ಯಂತ ಪವಿತ್ರವಾದದ್ದು. ಎಲ್ಲೇ ಇದ್ದರೂ, ಹೇಗೇ ಇದ್ದರೂ, ಹುಟ್ಟಿದ ಸ್ಥಳದ ಕಂಪು, ನೆಲದ ಹಿರಿಮೆ, ಪರಿಸರ ಗಳು ನಮ್ಮನ್ನು ನಿರಂತರವಾಗಿ ಕಾಡುತ್ತಿರುತ್ತದೆ. ನನ್ನ ಕರಾವಳಿಯಷ್ಟು ಸೊಬಗಿನಿಂದ ಕೂಡಿದ ಭೂಭಾಗ ಇನ್ನೆಲ್ಲಿರಲು ಸಾಧ್ಯ. ಇಂತಹ ನಾಡಿನಲ್ಲಿ ಹುಟ್ಟಿದ ಸಣ್ಣ ವಯಸ್ಸಿನಲ್ಲಿ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟೆ. ಸಾಧಕರಾದ ಎಲ್ಲರ ಬದುಕು ಕೂಡ ದೊಡ್ಡ ಪವಾಡದಂತೆಯೇ ಕಾಣುತ್ತದೆ ಎಂದರು.
ದೇಶದ ಅಭಿವೃದ್ಧಿ ಎಂದರೆ ಶಿಕ್ಷಣವೆಂದು ಬಾಬಾ ಸಾಹೇಬ್ ಅಂಬೇಡ್ಕರ್ ನಂಬಿದ್ದರು. ಅದರಲ್ಲೂ ಮಹಿಳೆಯರಿಗೆ ಶಿಕ್ಷಣ ದೊರೆತು ಆರ್ಥಿಕವಾಗಿ ಸಬಲ ರಾಗುವ ದಿಕ್ಕಿನಲ್ಲಿ ಇಲ್ಲಿನ ಶಿಕ್ಷಣ ಸಂಸ್ಥೆಗಳು ಸೇವೆ ಮಾಡುವ ಮೂಲಕ ವಿಶ್ವ ಮಾನ ವತ್ವವನ್ನು ಜಗತ್ತಿಗೆ ಸಾರುತ್ತಿದೆ. ಚಲನಚಿತ್ರಗಳು ಸಮಾಜದ ವಾಸ್ತವತೆ ಯನ್ನು ಮುಕ್ತ ವೇದಿಕೆಯಲ್ಲಿ ಕಥೆ ಮೂಲಕ ಹೇಳುವ ರೂಪವಾಗಿದೆ ಎಂದು ಅವರು ತಿಳಿಸಿದರು.
ಡಾ.ಎಂ.ನರೇಂದ್ರ ಮಾತನಾಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಬ್ಯಾಂಕಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಥಿಕ ಬೆಳವಣಿಗೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಮೂಲಕ ಸಮಾಜದ ಕಲ್ಯಾಣಕ್ಕೆ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಸ್ವಾಗತಿಸಿದರು. ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮ ಮೇಲ್ವಿಚಾರಣಾ ನಿರ್ದೇಶಕ ಡಾ. ರವಿರಾಜ್ ಎನ್.ಎಸ್. ವಂದಿಸಿದರು.
"ನಾನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ಒಂದು ವರ್ಷ ಕೆಲಸ ಮಾಡಿದ್ದು, ಜಿಲ್ಲೆಯ ವಿವಿಧ ಕ್ಷೇತ್ರಗಳ ಜನರನ್ನು ಒಗ್ಗೂಡಿಸಿ ನಡೆಸಿದ ಸಂಪರ್ಕ ಸಭೆಯು ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಒಂದು ಸ್ಪಷ್ಟ ಕಾರ್ಯಪಡೆ ಮಾಡಿಕೊಳ್ಳಲು ಸಹಾಯವಾಯಿತು. ಆದರೆ ನಮ್ಮ ಸರಕಾರದ ಆಯಸ್ಸು ದೀರ್ಘವಿರದ ಕಾರಣ ನಾನು ಆಲೋಚಿಸಿದ್ದ ಎಲ್ಲಾ ಕಾರ್ಯಗಳು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಆ ಬೇಸರ ನನ್ನಲ್ಲಿ ಇಂದಿಗೂ ಉಳಿದು ಬಿಟ್ಟಿದೆ"
-ಡಾ.ಜಯಮಾಲಾ, ನಟಿ, ಮಾಜಿ ಸಚಿವೆ