×
Ad

ಉಡುಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2024-01-28 17:59 IST

ಉಡುಪಿ, ಜ.28: ಉಡುಪಿ ಪ್ರವಾಸೋದ್ಯಮಕ್ಕೆ ಯೋಗ್ಯವಾಗಿರುವ ಜಿಲ್ಲೆ ಯಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

ಕುಂದಾಪುರದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಉಡುಪಿ ಮಂಗಳೂರು ಬೆಂಗಳೂರು ನಡುವೆ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗುವುದು. ಇದರಿಂದ ಜಿಲ್ಲೆಯ ಹೋಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮಕ್ಕೂ ಹೆಚ್ಚು ಅನುಕೂಲವಾಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಸರ್ವ ರೀತಿಯಿಂದಲೂ ಶ್ರಮಿಸಲಾಗುವುದು ಎಂದರು.

ಕರಾವಳಿ ಜನ ದೈವ ಭಕ್ತರು. ಅವರಿಗೆ ಸದಾ ದೇವರ ಆಶೀರ್ವಾದ ಇರುತ್ತದೆ. ಹೀಗಾಗಿಯೇ ಅವರು ದೇಶಾದ್ಯಂತ ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಜೊತೆಗೆ ಉದ್ಯಮಿಗಳಿಗೆ ಹೆಚ್ಚು ಅವಕಾಶ ನೀಡಬೇಕು ಎಂದು ಸಚಿವರು ಹೇಳಿದರು.

ಸಮಾರಂಭದಲ್ಲಿ ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News