×
Ad

ಕಾರ್ಕಡದಲ್ಲಿ ಕೃಷ್ಣದೇವರಾಯನ ಶಾಸನ ಪತ್ತೆ

Update: 2024-01-29 18:29 IST

ಬ್ರಹ್ಮಾವರ: ಕಾರ್ಕಡ ಗ್ರಾಮದ ನಾಗೇಶ್ವರ ಸೋಮಯಾಜಿ ಎಂಬವರ ಜಮೀನಿನಲ್ಲಿರುವ ಶಾಸನವನ್ನು ಕಂಚಾರ್ತಿ ರಾಜೇಶ್ವರ ಉಪಾಧ್ಯಾಯರ ಮಾಹಿತಿಯ ಮೇರೆಗೆ ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಪುರಾತತ್ವ ವಿಭಾಗದ ಉಪನ್ಯಾಸಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅಧ್ಯಯನಕ್ಕೆ ಒಳಪಡಿಸಿದ್ದಾರೆ.

ಕಣ(ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ-ಚಂದ್ರ ಮತ್ತು ಇಕ್ಕೆಲಗಳಲ್ಲಿ ನಂದಿ, ರಾಜಕತ್ತಿ ಮತ್ತು ದೀಪಕಂಬದ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ. ಸುಮಾರು 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಾಗಿರುವ ಈ ಶಾಸನವು ವಿಜಯನಗರದ ತುಳುವ ಮನೆತನ ದೊರೆ ಕೃಷ್ಣದೇವರಾಯನ ಕಾಲಕ್ಕೆ ಸೇರಿದ್ದಾಗಿದೆ.

ಶ್ರೀ ಗಣಾಧಿಪತಯೆಂ ನಮ ಎಂಬ ಶುಭ ಸೂಚಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರ್ಷ 1440ರ(ಸಾ.ಶ.ವ 1518) ಬಹುಧಾನ್ಯ ಸಂವತ್ಸರದ ಭಾದ್ರಪದ ಬಹುಳ ಎಂಬ ಕಾಲಮಾನವನ್ನು ಉಲ್ಲೇಖಿಸಿದ್ದು, ಈ ಸಂದರ್ಭದಲ್ಲಿ ಕೃಷ್ಣದೇವರಾಯನು(1509-1529) ವಿಜಯನಗರಿಯ ಸಿಂಹಾಸನದಲ್ಲಿದ್ದು ಬಾರಕೂರ ರಾಜ್ಯವನ್ನು ವಿಜಯಪ್ಪ ಒಡೆಯ (ಸಾ.ಶ.ವ 1519-20) ನೋಡಿ ಕೊಳ್ಳುತ್ತಿದ್ದ ಎಂಬ ಮಾಹಿತಿಯನ್ನು ನೀಡುತ್ತದೆ.

ಶಾಸನದಲ್ಲಿ ಧಾರಪೂರ್ವಕವಾಗಿ ಧಾರೆಯೆರೆದು ಕೊಟ್ಟ ದಾನ ಎಂಬ ಉಲ್ಲೇಖವಿದ್ದು, ದಾನ ವಿವರಣ ಭಾಗವು ತೃಟಿತಗೊಂಡಿದ್ದರಿಂದ ದಾನವನ್ನು ಯಾರು ಮತ್ತು ಯಾರಿಗೆ ನೀಡಿದ್ದರೆಂದು ತಿಳಿದು ಬರುವುದಿಲ್ಲ. ಶಾಸನದಲ್ಲಿ ಕರಣಿಕ ಮಲಸರ, ಅಂಣ ಎಂಬ ವ್ಯಕ್ತಿಗಳ ಉಲ್ಲೇಖವಿದ್ದು, ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು ಎಂದು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ತಿಳಿಸಿದ್ದಾರೆ.

ಕ್ಷೇತ್ರಕಾರ್ಯಕ್ಕೆ ಉಡುಪಿ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ ಕೃಷ್ಣಯ್ಯ, ಸತ್ಯನಾರಾಯಣ ಸೋಮ ಯಾಜಿ ಮತ್ತು ಕೆ.ವಿ.ಸುಬ್ರಮಣ್ಯಂ ಸಹಕಾರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News