×
Ad

ಉಡುಪಿ ಜಿಲ್ಲೆಯಾದ್ಯಂತ ಸೌಹಾರ್ದತೆ ಮೆರೆದ ಸರ್ವಧರ್ಮೀಯರ ಮಾನವ ಸರಪಳಿ

Update: 2024-01-30 19:48 IST

ಉಡುಪಿ : ಸೌಹಾರ್ದ ಕರ್ನಾಟಕ ಮತ್ತು ಸಹಬಾಳ್ವೆ ಉಡುಪಿ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಕಾರ ದೊಂದಿಗೆ ಮಹಾತ್ಮಾ ಗಾಂಧಿಯವರ ಹುತಾತ್ಮ ದಿನವಾದ ಇಂದು ಸೌಹಾರ್ದತೆಯ ಸಂಕೇತವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳ ಲಾಗಿತ್ತು.

ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿ ಶೋಕಾ ಮಾತಾ ಇಗರ್ಜಿಯ ಧರ್ಮಗುರು ಫಾ.ಚಾರ್ಲ್ಸ್ ಮೆನೆಜಸ್, ಅಬೂಬಕ್ಕರ್ ನೇಜಾರು ಜೊತೆಗೂಡಿ ಸರ್ವ ಧರ್ಮೀಯರು ಬಲೂನ್ ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾದಮಣಿ ನಾಲ್ಕೂರು ಶಾಂತಿ, ಪ್ರೀತಿ, ಸೌಹಾರ್ದತೆ ಹಾಡುಗಳನ್ನು ಹಾಡಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಹಾತ್ಮ ಗಾಂಧಿಗಿಂತ ದೊಡ್ಡ ರಾಮಭಕ್ತ ಇಡೀ ಜಗತ್ತಿನಲ್ಲಿ ಯಾರು ಇಲ್ಲ. ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರುವ ಮೂಲಕ ಗಾಂಧೀಜಿ ಶಾಂತಿ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಮಾಜದಲ್ಲಿ ನಾವೆಲ್ಲ ಸೌಹಾದರ್ತೆ ಯನ್ನು ಉಳಿಸುವ ನಿಟ್ಟಿನಲ್ಲಿ ಒಗ್ಗಟ್ಟು ಮೆರೆಯಬೇಕು ಎಂದು ತಿಳಿಸಿದರು.

ಉಡುಪಿ ಶೋಕಾ ಮಾತಾ ಇಗರ್ಜಿಯ ಧರ್ಮಗುರು ಫಾ.ಚಾರ್ಲ್ಸ್ ಮೆನೆಜಸ್ ಮಾತನಾಡಿ, ಗಾಂಧೀಜಿ ತನ್ನ ಇಡೀ ಜೀವನವನ್ನು ಮಾನವತೆಯ ಒಳಿತು, ಶಾಂತಿ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಪಣವಾಗಿ ಇಟ್ಟುಕೊಂಡರು. ಗಾಂಧೀಜಿ ನಮ್ಮೆಲ್ಲರನ್ನು ಜೊತೆಯಾಗಿಸಿ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಶಾಂತಿ ಸೌಹಾರ್ದತೆಗಾಗಿ ಶ್ರಮಿಸಿದ ಗಾಂಧೀಜಿ ನಡೆನುಡಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಗಾಂಧೀಜಿಯ ಅಹಿಂಸ ತತ್ವ ಯಾರಿಗೂ ನಾಶ ಮಾಡಲು ಸಾಧ್ಯವಿಲ್ಲ ಎಂದರು.

ವಿವಿಧ ಜಾತಿ ಧರ್ಮಗಳ ಮತ್ತು ವಿವಿಧ ವಿಚಾರಧಾರೆಗಳ ಜನರು ಜೊತೆ ಸೇರಿದಾಗ ಮಾತ್ರ ಶಾಂತಿ ಸಾಮರಸ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ ನಾವು ಒಗ್ಗಟ್ಟಿನಿಂದ ಇರುವ ಮೂಲಕ ಇಡೀ ಜಗತ್ತಿಗೆ ಶಾಂತಿ ಸಾಮರಸ್ಯದ ಸಂದೇಶವನ್ನು ಸಾರಬೇಕು ಎಂದು ಅವರು ಹೇಳಿದರು.

ಬಳಿಕ ಕೆಎಂ ರಸ್ತೆಯಿಂದ ಸರ್ವಿಸ್ ಬಸ್ ನಿಲ್ದಾಣದ ರಸ್ತೆಯವರೆಗೆ ಎಲ್ಲರೂ ಕೈ ಕೈ ಹಿಡಿದು ನಿಂತು ಮಾವನ ಸರಪಳಿ ಯನ್ನು ರಚಿಸಿದರು. ಈ ಸಂದರ್ಭದಲ್ಲಿ ಹಿರಿಯ ಚಿಂತಕ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದಸಂಸ ಮುಖಂಡರಾದ ಸುಂದರ್ ಮಾಸ್ತರ್, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಿಶ್ವಾಸ್ ಅಮೀನ್, ಅಬ್ದುಲ್ ಅಝೀಝ್ ಉದ್ಯಾವರ, ವರೋನಿಕಾ ಕರ್ನೆಲಿಯೋ, ಹುಸೇನ್ ಕೋಡಿಬೆಂಗ್ರೆ, ಕವಿರಾಜ್, ಶಶಿಧರ್ ಗೊಲ್ಲಾ ಮೊದಲಾದವರು ಉಪಸ್ಥಿತರಿದ್ದರು. ಸೌಹಾರ್ದ ಕರ್ನಾಟಕ ಸಂಘಟನೆಯ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News