×
Ad

ಉಡುಪಿ: ಪ್ರಸಿದ್ಧ ಹುಲಿವೇಷಧಾರಿ ಅಶೋಕ್‌ ರಾಜ್ ಕಾಡಬೆಟ್ಟು ನಿಧನ

Update: 2024-02-01 21:53 IST

ಉಡುಪಿ: ಉಡುಪಿಯ ಪ್ರಸಿದ್ಧ ಹುಲಿವೇಷಧಾರಿ, ಹುಲಿವೇಷ ತಂಡವೊಂದರ ಮುಖ್ಯಸ್ಥ, ಸಾಮಾಜಿಕ ಮುಂದಾಳು ಅಶೋಕ್‌ರಾಜ್ ಕಾಡಬೆಟ್ಟು (56) ದೀರ್ಘಕಾಲದ ಅಸೌಖ್ಯದ ಬಳಿಕ ಇಂದು ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ವರ್ಷ ನವರಾತ್ರಿಯ ಸಂದರ್ಭದಲ್ಲಿ ಹುಲಿವೇಷ ಪ್ರದರ್ಶನ ನೀಡಲು ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಾರ್ಯ ಕ್ರಮ ಆಯೋಜಿಸುತ್ತಿರುವಾಗಲೇ ಕುಸಿದು ಬಿದ್ದ ಅಸ್ವಸ್ಥರಾಗಿದ್ದ ಅಶೋಕ್‌ರಾಜ್ ಮೊದಲು ಬೆಂಗಳೂರು ಬಳಿಕ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಕೊನೆಯುಸಿರೆಳೆದರು ಎಂದು ಸಹೋದರ ಕಲಾವಿದ ಹುಲಿವೇಷದಾರಿ ಕಿಶೋರ್‌ ರಾಜ್ ಕಾಡಬೆಟ್ಟು ತಿಳಿಸಿದರು.

‘ಟೈಗರ್ ಅಶೋಕ್’ ಎಂದೇ ಜನಪ್ರಿಯರಾಗಿದ್ದ ಅಶೋಕ್‌ ರಾಜ್, ಹುಲಿವೇಷಧಾರಿಯಾಗಿ ಹುಲಿವೇಷ ಕುಣಿತದಲ್ಲಿ ತಮ್ಮದೇ ಆದ ಹೊಸ ಛಾಪನ್ನು ಮೂಡಿಸಿದ್ದರು. ಕಳೆದ 26 ವರ್ಷಗಳಿಂದ ಹುಲಿವೇಷ ತಂಡ ಕಟ್ಟಿಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರು ಮಾಡಿದ್ದರು. ಹುಲಿವೇಷ ಧರಿಸಿ ಕಳೆದ 36 ವರ್ಷಗಳಿಂದ ಸತತವಾಗಿ ಪ್ರತಿ ಅಷ್ಟಮಿ ಹಾಗೂ ನವರಾತ್ರಿ ಸಂದರ್ಭಗಳಲ್ಲಿ ಉಡುಪಿಯಲ್ಲಿ ಹುಲಿಯ ಎಲ್ಲಾ ಸಾಂಪ್ರದಾಯಿಕ ಧೀರೋದ್ದಾತ ನರ್ತನದ ಮೂಲಕ ಜನರನ್ನು ರಂಜಿಸುತಿದ್ದರು.

ಇದರ ಜೊತೆಗೆ ಅಶೋಕ್ ಹುಲಿಕುಣಿತದಲ್ಲಿ ಆಸಕ್ತಿ ಇರುವವರಿಗೆ ಅವಕಾಶ ನೀಡಿ ಪ್ರೋತ್ಸಾಹಿಸುತಿದ್ದರು.ಹುಲಿವೇಷ ಹಾಕಿ ನರ್ತಿಸಲು ಆಸಕ್ತಿಯುಳ್ಳವರಿಗೆ ತರಬೇತಿ ನೀಡುತಿದ್ದು, ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದರು. ಬಿಬಿಸಿ ಟಿವಿ, ಮಾಹೆ ಸೇರಿದಂತೆ ಹುಲಿವೇಷ ಕುಣಿತದ ಅಧ್ಯಯನ, ದಾಖಲೀಕರಣ ಹಾಗೂ ಚಿತ್ರೀಕರಣಕ್ಕಾಗಿ ಅಶೋಕ್‌ರಾಜ್ ಅವರ ತಂಡವೇ ಆಯ್ಕೆಯಾಗಿತ್ತು ಎಂಬುದು ಆ ತಂಡದ ಸಾಧನೆಗೆ ಸಿಕ್ಕಿದ ಹೆಗ್ಗುರುತಾಗಿತ್ತು.

2006ರಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ನಡೆದ ಹುಲಿವೇಷ ಸ್ಪರ್ಧಯಲ್ಲಿ ಇವರ ತಂಡಕ್ಕೆ ಪ್ರಥಮ ಬಹುಮಾನ ಬಂದಿತ್ತು. ಕಟೀಲಿನಲ್ಲಿ ನಡೆದ 24ನೇ ವರ್ಷದ ಹುಲಿವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಹುಲಿಕುಣಿತದಲ್ಲಿ ಅಕ್ಕಿಮುಡಿ ಎತ್ತುವ ಪರಿಕಲ್ಪನೆಯನ್ನು ಪರಿಚಯಿಸಿದವರೇ ಅಶೋಕ್‌ರಾಜ್ ಕಾಡಬೆಟ್ಟು.

ಅಶೋಕ್‌ರಾಜ್ ಕಾಡಬೆಟ್ಟು ತಂಡದೊಂದಿಗೆ ಬೆಂಗಳೂರು, ಹೈದರಾಬಾದ್ ಸೇರಿದಂತೆ ನಾಡಿನ ಅನೇಕ ಕಡೆಗಳಲ್ಲಿ ಪ್ರದ ರ್ಶನ ನೀಡಿದ್ದರು. ಎರಡು ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದ ಪುತ್ತೂರ‌್ದ ಪಿಲಿರಂಗ್ ಸೀಝನ್-1ರಲ್ಲಿ ಅಶೋಕ್‌ ರಾಜ್‌ರನ್ನು ಸನ್ಮಾನಿಸಲಾಗಿತ್ತು. ಹುಲಿವೇಷ ಕುಣಿತದಲ್ಲಿ ‘ಲೇಡಿ ಟೈಗರ್’ ಎಂದೇ ಖ್ಯಾತಿ ಹೊಂದಿರುವ ಸುಷ್ಮಾ ರಾವ್ ಇವರ ಪುತ್ರಿ. ಅಶೋಕ್‌ರಾಜ್ ಕಾಡಬೆಟ್ಟು ಅವರ ಅಂತ್ಯಸಂಸ್ಕಾರ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ. 



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News