×
Ad

ಉಡುಪಿ : ಉಪಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

Update: 2024-02-03 21:00 IST

ಉಡುಪಿ, ಫೆ.3: ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲೆಯ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವುಗಳನ್ನು ಪರಿಶೀಲಿಸಿ ಕೆಲವನ್ನು ವಿಚಾರಣೆಗೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜನಸಾಮಾನ್ಯರ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ದೂರುದುಮ್ಮಾನಗಳನ್ನು ಸಮಾಧಾನ ಚಿತ್ತದಿಂದ ಆಲಿಸಿದ ನ್ಯಾಯಮೂರ್ತಿಗಳು, ಅವರ ದೂರುಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿ ಕೆಲವನ್ನು ವಿಚಾರಣೆಗೆ ಸ್ವೀಕರಿಸಿದರಲ್ಲದೇ, ಇನ್ನು ಕೆಲವನ್ನು ಇತ್ಯರ್ಥ ಪಡಿಸಲು ಜಿಲ್ಲಾಧಿಕಾರಿಗಳು, ಕುಂದಾಪುರ ಉಪವಿಭಾಗಾಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರಿಗೆ ನೀಡಿ ಕೂಡಲೇ ಅವುಗಳನ್ನು ಸೂಕ್ತರೀತಿಯಲ್ಲಿ ಇತ್ಯರ್ಥ ಪಡಿಸಲು ಸೂಚನೆಗಳನ್ನು ನೀಡಿದರು.

ಅರ್ಜಿಗಳ ವಿಚಾರಣೆ ವೇಳೆ ಕೆಲವೊಮ್ಮೆ ಕಿರಿಕಿರಿ ಮಾಡಿದ ದೂರುದಾರರಿಗೇ -ವಿಶೇಷವಾಗಿ ಹಿರಿಯ ನಾಗರಿಕರಿಗೆ- ಲಘು ವಾಗಿ ಗದರಿಸಿ ಸುಮ್ಮನಿರಿಸಿದ ನ್ಯಾ.ಫಣೀಂದ್ರ, ನನಗೆ ಕಾನೂನು ಪಾಯಿಂಟ್‌ಗಳನ್ನು ಕಲಿಸಲು ಬರಬೇಡಿ, ನಿಮ್ಮ ಸಮಸ್ಯೆಗಳೇನು ಎಂಬುದನ್ನು ತಿಳಿಸಿ. ಅದನ್ನು ಹೇಗೆ ಇತ್ಯರ್ಥಪಡಿಸಬೇಕು ಎಂದು ನಾನು ತೀರ್ಮಾನಿಸುತ್ತೇನೆ ಎಂದು ಛೇಡಿಸಿದರು.

ವಿಚಾರಣೆಯ ವೇಳೆ ತಪ್ಪಿತಸ್ಥರೆಂದು ಕಂಡುಬಂದ ಅಧಿಕಾರಿಗಳನ್ನು ಸಹ ಅವರು ಸುಮ್ಮನೆ ಬಿಡಲಿಲ್ಲ.ಕೆಲವು ಅಧಿಕಾರಿ ಗಳನ್ನು ಜೋರಾಗಿ ಗದರಿಸಿದ ನ್ಯಾಯಮೂರ್ತಿಗಳು, ಒಂದು ಗಂಟೆಯಲ್ಲಿ ಇತ್ಯರ್ಥ ಪಡಿಸಬಹುದಾದ ಅರ್ಜಿಯೊಂದಕ್ಕೆ ದೂರುದಾರರನ್ನು ಮೂರು ತಿಂಗಳು ಸತಾಯಿಸಿದ ಅಧಿಕಾರಿಗೆ ಕಟುವಾದ ಎಚ್ಚರಿಕೆಯನ್ನು ಕೊಟ್ಟು ಕಳುಹಿಸಿದರು.

ಇಡೀ ದಿನದಲ್ಲಿ ಒಟ್ಟು 154 ದೂರು ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಇವುಗಳಲ್ಲಿ 72 ಅರ್ಜಿಗಳನ್ನು ಇತ್ಯರ್ಥ ಪಡಿಸಲಾ ಗಿದೆ. ಇವುಗಳಲ್ಲಿ ಕೆಲವನ್ನು ಲೋಕಾಯುಕ್ತದಲ್ಲಿ ವಿಚಾರಣೆಗೆ ಸ್ವೀಕರಿಸಲಾಗಿದೆ. ಬಾಕಿ ಉಳಿದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ನಡೆಸಿ ಇತ್ಯರ್ಥ ಪಡಿಸುವುದಾಗಿ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ತಿಳಿಸಿದರು.

ಜಿಲ್ಲೆಯಲ್ಲಿ ಕಂದಾಯ ಇಲಾಖೆ ವಿರುದ್ಧ ಅತ್ಯಧಿಕ ಅರ್ಜಿಗಳು (48) ಬಂದಿದ್ದು, ಪಂಚಾಯತ್‌ರಾಜ್ ಗ್ರಾಮೀಣ ಅಭಿವೃದ್ಧಿ ಇಲಾಖೆ ವಿರುದ್ಧ 29 ಅರ್ಜಿಗಳು ಸಲ್ಲಿಕೆಯಾಗಿದ್ದವು. ಧಾರ್ಮಿಕ ದತ್ತಿ ಇಲಾಖೆ, ಸ್ಥಳೀಯ ಸಂಸ್ಥೆಗಳು, ಗೃಹ ಮಂಡಳಿ ವಿರುದ್ಧವೂ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾದವು.

ವಿವಿಧ ಇಲಾಖೆಗಳ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿವರ ಹೀಗಿದೆ. ಕಂದಾಯ ಇಲಾಖೆ-48, ಗ್ರಾಮೀಣ ಅಭಿವೃದ್ಧಿ ಇಲಾಖೆ-29, ಸ್ಥಳೀಯ ಸಂಸ್ಥೆಗಳು-9, ಮೆಸ್ಕಾಂ-2, ಧಾರ್ಮಿಕ ದತ್ತಿ ಇಲಾಖೆ-8, ಗೃಹ ಮಂಡಳಿ- 11, ಸಹಕಾರಿ ಇಲಾಖೆ-3, ಭೂ ಮಾಪನ ಇಲಾಖೆ-7, ಪೊಲೀಸ್ ಇಲಾಖೆ-8, ಆರೋಗ್ಯ ಇಲಾಖೆ-5, ನೋಂದಣಿ ಇಲಾಖೆ-2, ಅರಣ್ಯ ಇಲಾಖೆ-2, ಗಣಿ ಇಲಾಖೆ-4, ಆರ್‌ಟಿಓ-3, ನಗರಾಭಿವೃದ್ಧಿ ಇಲಾಖೆ-2, ಪಿ.ಡಬ್ಲ್ಯೂಡಿ-2, ಶಿಕ್ಷಣ ಇಲಾಖೆ-3, ಸಾರಿಗೆ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕೆಪಿಟಿಸಿಎಲ್, ಕೆಆರ್‌ಡಿಎಲ್, ಕೆಎಸ್ಸಾರ್ಟಿಸಿ, ನೀರಾವರಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಕೆನರಾ ಬ್ಯಾಂಕ್, ನಿರ್ಮಿತಿ ಕೇಂದ್ರದ ವಿರುದ್ಧ ತಲಾ 1 ಅರ್ಜಿಗಳು ಸಲ್ಲಿಕೆಯಾಗಿವೆ.

ಸಂಪರ್ಕ ನೀಡದ ಮೆಸ್ಕಾಂ: ಕಟಪಾಡಿ ಮಟ್ಟುವಿನ ಸರಸ್ವತಿ ಅವರು ಶಿಥಿಲಗೊಂಡ 70 ವರ್ಷ ಹಳೆ ಮನೆಯನ್ನು ಕಟ್ಟಿ ಹೊಸ ಮನೆ ಕಟ್ಟಿದ್ದು, ಅದಕ್ಕೆ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡಲು ನಿರಾಕರಿಸಿದ ಬಗ್ಗೆ ದೂರಿದರು. ಮಣಿಪಾಲ ಶಿವಳ್ಳಿ ಗ್ರಾಮದ ಸಂಕ್ರಿ ಸಾಲಿಯಾನ್ ಅವರು 15 ಸೆನ್ಸ್ ಜಮೀನನ್ನು ಅಕ್ರಮ ಸಕ್ರಮದಡಿ ಹಕ್ಕುಪತ್ರ ನೀಡದಿರುವ ಬಗ್ಗೆ ಉಡುಪಿ ತಹಶೀಲ್ದಾರ್ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಸಾಲಿಗ್ರಾಮದ ನಾಗರಾಜ ಗಾಣಿಗ ವಿವಿಧ ಇಲಾಖೆಗಳ ಸಾರ್ವಜನಿಕ ಹಣದ ದುರುಪಯೋಗ, ಅಧಿಕಾರ ದುರುಪಯೋಗ, ಕರ್ತವ್ಯ ಲೋಪಗಳ ಕುರಿತು ದೂರು ಸಲ್ಲಿಸಿದರು. ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಹೂವಯ್ಯ ಖಾರ್ವಿ ಅವರು ಸ್ವಾತಂತ್ರ್ಯ ಹೋರಾಟಗಾರ ಗೋವಿಂದ ಖಾರ್ವಿ ಕುಟುಂಬಕ್ಕೆ ಭೂಮಿ ಮಂಜೂರಾತಿ ಇತ್ಯರ್ಥ ಪಡಿಸುವ ಬಗ್ಗೆ ಕಂದಾಯ ಇಲಾಖೆ ವಿರುದ್ಧ ದೂರು ಸಲ್ಲಿಸಿದರು.

ಉಡುಪಿಯ ಕೃಷ್ಣಾನಂದ ಮಲ್ಯ ಅವರು ತಮ್ಮ ಜಮೀನಿನ ಮೇಲೆ ಹೈಟೆನ್ಷನ್ ವಯರ್ ಹಾದು ಹೋಗಿರುವುದಕ್ಕೆ ಪರಿಹಾರ ನೀಡದ ಬಗ್ಗೆ ಕೆಪಿಟಿಸಿಎಲ್ ವಿರುದ್ಧ ದೂರು ಸಲ್ಲಿಸಿದರು. ಕಾರ್ಮಿಕ ನಾಯಕ ವೆಂಕಟೇಶ ಕೋಣಿ ಅವರು ನಿವೇಶನ ರಹಿತರಿಗೆ ವಿತರಿಸಲು ಸರಕಾರಿ ಸ್ಥಳ ಕಾದಿರಿಸದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದರು.

ಮನೆ ನಿವೇಶನಕ್ಕೆ ಕಾದಿರುವವರಿಂದ ದೂರು ಅರ್ಜಿ

ಬ್ರಹ್ಮಾವರ ಇಂದಿರಾನಗರದ ಜಯಶ್ರೀ ಅವರು ಉಪಲೋಕಾಯುಕ್ತರಿಗೆ ಕರ್ನಾಟಕ ಗೃಹ ಮಂಡಳಿ ವಿರುದ್ಧ ಅರ್ಜಿ ಸಲ್ಲಿ ಸಿದ್ದು, ಮಂಡಳಿಯು 2016ರಲ್ಲಿ ಬ್ರಹ್ಮಾವರ ಹೋಬಳಿಯ ವಾರಂಬಳ್ಳಿ ಗ್ರಾಮದ ಬಿರ್ತಿಯಲ್ಲಿ 6 ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಿ ಮನೆ ನಿರ್ಮಾಣ ಹಾಗೂ ನಿವೇಶನ ಸೇವೆ ಒದಗಿಸುವ ಪ್ರಕಟಣೆ ನೀಡಿದ್ದು, ಅದರಂತೆ ತಾನು ನಿಗದಿ ಪಡಿಸಿದ ಹಣ ಕಟ್ಟಿದ್ದೇನೆ. ಆದರೆ ಈವರೆಗೆ ಅಲ್ಲಿ ಲೇಔಟ್ ನಿರ್ಮಾಣಗೊಂಡಿಲ್ಲ. ಮನೆಯೂ ಇಲ್ಲ, ನಿವೇಶನವೂ ಇಲ್ಲ. ಮಂಡಳಿಯು ಹಣವನ್ನೂ ಹಿಂದಿರುಗಿಸುತ್ತಿಲ್ಲ ಎಂದು ದೂರಿದರು.

ಉಪಲೋಕಾಯುಕ್ತರು ಗೃಹ ಮಂಡಳಿ ಅಧಿಕಾರಿ ಬಳಿ ವಿವರಣೆ ಕೇಳಿದಾಗ, 2015ರಲ್ಲೇ ಜಿಲ್ಲಾಧಿಕಾರಿಗಳು 6 ಎಕರೆ ಜಮೀನು ಮಂಜೂರು ಮಾಡಿದ್ದು, ಮಂಡಳಿ 1.80ಕೋಟಿ ರೂ.ವನ್ನು ಇದಕ್ಕೆ ಪಾವತಿಸಿದೆ. 2016ರ ಜೂ.30ರಂದು ಪ್ರಕಟಣೆಯ ಮೂಲಕ ಸಾರ್ವಜನಿಕರಿಂದ ಮನೆ-ನಿವೇಶನಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 88 ಅರ್ಜಿಗಳು ಬಂದಿದ್ದು, 61.17 ಲಕ್ಷ ರೂ. ಠೇವಣಿ ಸಂಗ್ರಹವಾಗಿದೆ ಎಂದರು.

ಗೃಹ ಮಂಡಳಿ2017ರ ಜ.9ರಂದು ಉದ್ದೇಶಿತ ವಸತಿ ಯೋಜನೆಯ ವಿನ್ಯಾಸ ನಕ್ಷೆಯನ್ನು ಅನುಮೋದನೆಗಾಗಿ ವಾರಂಬಳ್ಳಿ ಪಂಚಾಯತ್‌ಗೆ ಸಲ್ಲಿಸಿದ್ದು, ಫೆ.17ರಂದು ಗ್ರಾಪಂ ನಕ್ಷೆಗೆ ಅನುಮೋದನೆ ನೀಡಲು ನಿರಾಕರಿಸಿ ಪತ್ರ ಬರೆದಿದೆ ಎಂದು ವಿವರಿಸಿದರು.

ವಿನ್ಯಾಸವನ್ನು ಮಾರ್ಪಾಡುಗೊಳಿಸಿ ಗ್ರಾಪಂ ತಿಳಿಸಿದಂತೆ 2023ರ ಸೆ.11ರಂದು ಹೊಸ ವಿನ್ಯಾಸವನ್ನು ಸಲ್ಲಿಸಿದ್ದರೂ ಕಳೆದ ಜ.23ರಂದು ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೆ ನಕ್ಷೆಗೆ ಅನುಮೋದನೆ ನೀಡಲು ನಿರಾಕರಿಸಿದೆ ಎಂದು ಮಂಡಳಿ ಅಧಿಕಾರಿ ತಿಳಿಸಿದರು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಲ್ಲಿ 10ಕ್ಕೂ ಅಧಿಕ ಮಂದಿ ಇದೀಗ ದೂರು ಸಲ್ಲಿಸಿದ್ದಾರೆ.

ವಾರಂಬಳ್ಳಿ ಗ್ರಾಪಂ ಪಿಡಿಓ ಹಾಗೂ ಇಓರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ನೀಡಿದ ವಿವರಣೆಯಿಂದ ಅಸಮಧಾನ ಗೊಂಡ ನ್ಯಾಯಮೂರ್ತಿಗಳು ಪಂಚಾಯತ್ ಹಾಗೂ ಪಿಡಿಓರನ್ನು ಪಾರ್ಟಿ ಮಾಡಿ ಅರ್ಜಿ ಸಲ್ಲಿಸುವಂತೆ ದೂರುದಾರರಿಗೆ ಸೂಚಿಸಿದರು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News