×
Ad

ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಲೋಕಾಯುಕ್ತದ ಕುರಿತು ಅರಿವು: ಉಪಲೋಕಾಯುಕ್ತ ನ್ಯಾ.ಫಣೀಂದ್ರ

Update: 2024-02-04 18:44 IST

ಉಡುಪಿ, ಜ.4: ಲೋಕಾಯುಕ್ತ ಮತ್ತು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅವಿನಾಭ ಸಂಬಂಧ ಇದೆ. ಪ್ರಾಧಿಕಾರವು ಮೂಲಕ ಲೋಕಾಯುಕ್ತ ಸಂಸ್ಥೆಗಳ ಕಾನೂನು ಅರಿವು ಜನರಿಗೆ ಮೂಡಿಸುವುದರ ಜೊತೆ ಅವರ ಸಮಸ್ಯೆಗಳನ್ನು ಆಲಿಸುವ ಕಾರ್ಯ ಮಾಡಬೇಕು. ಲೋಕಾಯುಕ್ತದಲ್ಲಿ ದಾಖಲಾಗುವ ಜಿಲ್ಲಾ ಮಟ್ಟದ ಪ್ರಕರಣಗಳನ್ನು ಕೂಡ ಕೈಗೆತ್ತಿ ಕೊಂಡು ಪರಿಶೀಲನೆ ನಡೆಸಿ ತಕ್ಷಣ ವರದಿ ಕೊಟ್ಟರೆ ಪ್ರಕರಣ ಇತ್ಯರ್ಥ ಪಡಿಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಉಡುಪಿ ಕೋರ್ಟ್ ಹಾಲ್‌ನಲ್ಲಿ ಆಯೋಜಿಸಲಾದ ‘ಉತ್ತಮ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಪಾತ್ರ’ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜನರಲ್ಲಿ ಕಾನೂನು ಅರಿವು ಮೂಡಿಸುವ ಕಾನೂನು ಸೇವಾ ಪ್ರಾಧಿಕಾರ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಮೂಲಕ ಪ್ರಾಧಿಕಾರ ಜನರಲ್ಲಿ ನಂಬಿಕೆ ಹಾಗೂ ವಿಶ್ವಾಸವನ್ನು ಮೂಡಿಸಿದೆ. ನ್ಯಾಯದಾನ ಜೊತೆಗೆ ಕಾನೂನು ಅರಿವಿನ ಮೂಲಕ ನ್ಯಾಯಾಧೀಶರು ಸೇವಾ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳುತ್ತಿ ದ್ದಾರೆ. ಇಂದು ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಗಿರುವುದರಿಂದ ಜನರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಹೆಚ್ಚು ಹೆಚ್ಚು ದೂರು ಗಳನ್ನು ಸಲ್ಲಿಸುತ್ತಿದ್ದಾರೆ. ಆದುದರಿಂದ ನ್ಯಾಯಾಧೀಶರು ಈ ನಂಬಿಕೆ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಸಾಮಾಜಿಕ ವ್ಯವಸ್ಥೆ ಹದಗೆಟ್ಟು ತಪ್ಪು ದಾರಿಯಲ್ಲಿ ಹೋದಾಗ ಶಾಸಕಾಂಗ ಹಾಗೂ ಕಾರ್ಯಾಂಗಕ್ಕೆ ಮಾರ್ಗದರ್ಶನ ಮಾಡುವ ಮಹತ್ತರ ಜವಾಬ್ದಾರಿ ಯನ್ನು ನ್ಯಾಯಾಂಗ ವ್ಯವಸ್ಥೆ ಹೊಂದಿದೆ. ನ್ಯಾಯಾಧೀಶರು ದೇವರ ಪ್ರತಿನಿಧಿ ಯಾಗಿ ಈ ಪವಿತ್ರ ಸ್ಥಾನದಲ್ಲಿ ಕುಳಿತು ನ್ಯಾಯದಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಯಾಂತ್ರೀಕೃತ ರೀತಿಯಲ್ಲಿ ಕೆಲಸ ಮಾಡುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಇರಬಾರದು ಎಂದರು.

ಕಾರ್ಯಾಂಗ ಮತ್ತು ಶಾಸಂಕ ಸರಿಯಾಗಿ ಕೆಲಸ ಮಾಡದೇ ಇದ್ದಾಗ ತನ್ನ ಹಕ್ಕನ್ನು ನ್ಯಾಯಾಂಗ ಚಲಾಯಿಸಬಹು ದಾಗಿದೆ. ಆದರೆ ನ್ಯಾಯಾಲಯವು ಇಂದು ನ್ಯಾಯಾಲಯಕ್ಕೆ ಬರುವವರೆಗೆ ಮಾತ್ರ ನ್ಯಾಯ ಕೊಡುವ ಕೆಲಸ ಮಾಡುತ್ತಿದೆ. ನ್ಯಾಯಾಲಯದ ಹೊರಗೆ ಇರುವ ಸಮಸ್ಯೆಗಳು ಹಾಗೂ ಅನ್ಯಾಯಗಳು ನ್ಯಾಯಾಲಯದ ಅರಿವಿಗೆ ಬರುವುದೇ ಇಲ್ಲ. ನ್ಯಾಯಾಲಯಕ್ಕೆ ಕೇವಲ ಶೇ.10ರಷ್ಟು ದೂರುಗಳು ಬಂದರೆ ಶೇ.90ರಷ್ಟು ಸಮಸ್ಯೆಗಳು ನ್ಯಾಯಾಲಯದ ಹೊರಗೆ ಇರುತ್ತದೆ. ಅದಕ್ಕೆ ಸ್ವಯಂಪ್ರೇರಿತರಾಗಿ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ನ್ಯಾಯಾಧೀಶರು ಪ್ರಾಧಿಕಾರದ ಮೂಲಕ ಮಾಡ ಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪವಹಿಸಿದ್ದರು. ರಾಜ್ಯ ಲೋಕಾ ಯುಕ್ತ ವಿಚಾರಣೆಗಳ ಉಪ ನಿಬಂಧಕ ಎಂ.ವಿ.ಚೆನ್ನಕೇಶವ ರೆಡ್ಡಿ, ಲೋಕಾಯುಕ್ತ ವಿಚಾರಣೆ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ.ಸೈಮನ್, ನ್ಯಾಯಾಧೀಶರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಪ ಲೋಕಾಯುಕ್ತರನ್ನು ಉಡುಪಿ ಜಿಲ್ಲಾ ಪ್ರಾಧಿಕಾರದ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಲೋಕಾಯುಕ್ತ ಸಂಸ್ಥೆ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಇಲ್ಲ. ಕೆಲವರಿಗೆ ಲೋಕಾಯುಕ್ತ ಸಂಸ್ಥೆ ಇದೆಯೇ ಎಂಬುದೇ ಗೊತ್ತಿಲ್ಲ. ಆ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಲು ನಮ್ಮಲ್ಲಿ ಸಿಬ್ಬಂದಿ ಅಥವಾ ಕಾನೂನು ಸೇವಾ ಪ್ರಾಧಿಕಾರ ದಂತಹ ಪ್ರತ್ಯೇಕ ವಿಭಾಗಗಳಿಲ್ಲ ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು.

ಲೋಕಾಯುಕ್ತ ಸಂಬಂಧಪಟ್ಟಂತೆ ಕರ್ತವ್ಯ ಲೋಪ ಸೇರಿದಂತೆ ವಿವಿಧ ಅರ್ಜಿಗಳು ಪ್ರಾಧಿಕಾರಕ್ಕೆ ಬಂದರೆ, ಅದನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೇಕು. ನಮ್ಮಲ್ಲಿಗೆ ಪ್ರಾಧಿಕಾರಕ್ಕೆ ಸಂಬಪಂಧಪಟ್ಟ ದೂರುಗಳು ಬಂದರೆ ನಾವು ನಿಮಗೆ ವರ್ಗಾವಣೆ ಮಾಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News