×
Ad

ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಓಬಿಸಿ ನಿರ್ಲಕ್ಷ್ಯ ಸಲ್ಲದು: ದೀಪಕ್ ಕೆಳಮನೆ

Update: 2024-02-04 19:05 IST

ಉಡುಪಿ: ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ಸಮುದಾಯವನ್ನು ನಿರ್ಲಕ್ಷಿಸ ಬಾರದು ಎಂದು ಭಾರತೀಯ ಓಬಿಸಿ ಮಹಾಸಭೆಯ ಕರ್ನಾಟಕ ರಾಜ್ಯ ಅಧ್ಯಕ್ಷ ದೀಪಕ ಕೆಳಮನೆ ಆಗ್ರಹಿಸಿದ್ದಾರೆ.

ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಓಬಿಸಿ ಅಭ್ಯರ್ಥಿಗಳಿಗೆ ಸುಮಾರು ಮೂರನೇ ಒಂದು ಭಾಗದಷ್ಟು ಟಿಕೆಟ್ ನೀಡಿದ ಪರಿಣಾಮವಾಗಿಯೇ ಆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲು ಸಾಧ್ಯವಾಯಿತು. ಬಿಜೆಪಿ ಹೈಕಮಾಂಡ್ ಇದನ್ನು ಪರಿಗಣಿಸಿ ಓಬಿಸಿ ಸಮುದಾಯಕ್ಕೆ ಟಿಕೆಟ್ ನೀಡಿಕೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಲಿಂಗಾಯತರು 9, ಒಕ್ಕಲಿಗರು 7 ಇದರಲ್ಲಿ ಒಬ್ಬರು ಕಾಂಗ್ರೆಸ್ ಹಾಗೂ ಮತ್ತೊಬ್ಬರು ಜೆಡಿಎಸ್ ಪಕ್ಷಕ್ಕೆ ಸೇರಿದವರು. ಬ್ರಾಹ್ಮಣರು ಸಣ್ಣ ಸಮುದಾಯವಾದರೂ 3 ಸ್ಥಾನ ಪಡೆದು‌ ಕೊಂಡಿದ್ದಾರೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಒಟ್ಟಾಗಿ 7 ಸ್ಥಾನ ಪಡೆದುಕೊಂಡಿವೆ. ಸ್ವತಂತ್ರ ಗುಂಪನ್ನು ಪ್ರತಿನಿಧಿಸುವ ನಾಯ್ಡು - ಕಮ್ಮ ಸಮುದಾಯವು ಒಂದು ಸ್ಥಾನ ಗೆದ್ದಿತ್ತು. ಬಲಿಜಿಗ ಸಮುದಾಯ ಸಹ 1 ಸ್ಥಾನ ಪಡೆದುಕೊಂಡಿದೆ. ಆದರೆ ಓಬಿಸಿಯಿಂದ ಬಿಜೆಪಿ ಯಾರಿಗೂ ಪ್ರಾತಿನಿಧ್ಯ ನೀಡಿಲ್ಲ. ಇದು ಬಿಜೆಪಿಯ ಬಗ್ಗೆ ಓಬಿಸಿ ಸಮುದಾಯ ಮುನಿಸಿಕೊಳ್ಳಲು ಕಾರಣವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಲೇ ಬಿಜೆಪಿ ಈ ಬಗ್ಗೆ ಎಚ್ಚೆತ್ತುಕೊಂಡು ಓಬಿಸಿ ಸಮುದಾಯಕ್ಕೆ ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು. ಆ ಮೂಲಕ ಹಿಂದುಳಿದವರ ಪರವಾಗಿ ನಾವಿದ್ದೇವೆ ಎಂಬ ಸಂದೇಶ ಹೋಗುವಂತಾಗಬೇಕು. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News