×
Ad

‘ಪ್ರತಿದಿನ ಶೌಚಾಲಯ ಸ್ಪಚ್ಚಗೊಳಿಸಿ, ಎಲ್ಲ ಮಕ್ಕಳಿಗೂ ಬೆಡ್ ವ್ಯವಸ್ಥೆ ಕಲ್ಪಿಸಿ’

Update: 2024-02-04 20:41 IST

ಉಡುಪಿ: ‘ಹೆಣ್ಣು ಮಕ್ಕಳು ಇರುವ ಹಾಸ್ಟೆಲ್‌ನ ಶೌಚಾಲಯವನ್ನು ಎರಡು ದಿನಗಳ ಬದಲಿಗೆ ಪ್ರತಿದಿನ ಶುಚಿಗೊಳಿಸುವ ಕಾರ್ಯ ಮಾಡಬೇಕು. ಅಲ್ಲದೆ ಒಂದೇ ಕೋಣೆಯಲ್ಲಿ ಕೆಲವರು ಬೆಡ್‌ನಲ್ಲಿ, ಇನ್ನು ಕೆಲವರು ನೆಲದಲ್ಲಿ ಮಲಗಿಸುವ ತಾರ ತಮ್ಯ ನೀತಿಯನ್ನು ಬಿಟ್ಟು ಎಲ್ಲರಿಗೂ ಬೆಡ್ ವ್ಯವಸ್ಥೆ ಕಲ್ಪಿಸಿ’

ಇದು ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಇಂದು ಬನ್ನಂಜೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭ ಅಧಿಕಾರಿಗಳಿಗೆ ನೀಡಿದ ಸೂಚನೆ.

ಹಾಸ್ಟೆಲ್‌ನ ಅಡುಗೆ ಕೋಣೆಗೆ ತೆರಳಿದ ಉಪಲೋಕಾಯುಕ್ತರು, ಮಕ್ಕಳಿಗೆ ಮಾಡಿದ ಚಹಾವನ್ನು ಸ್ವತಃ ತಾವೇ ಕುಡಿದು ಪರಿಶೀಲಿಸಿದರು. ಬಳಿಕ ಮಕ್ಕಳ ಕೋಣೆಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದರು. ಆಗ ಕೆಲವು ಮಕ್ಕಳು ನೆಲದಲ್ಲಿ ಮಲಗುವ ವಿಚಾರ ತಿಳಿದ ಅವರು, ಎಲ್ಲರಿಗೂ ಮಂಚ ಹಾಗೂ ಬೆಡ್ ವ್ಯವಸ್ಥೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖಾಧಿಕಾರಿಗೆ ಸೂಚಿಸಿದರು.

ತಿಂಗಳಿಗೆ 2000ರೂ. ನೀಡುವುದರಿಂದ ಸ್ಥಳೀಯ ಮಹಿಳೆಯೊಬ್ಬರು ಎರಡು ದಿನಕ್ಕೊಮ್ಮೆ ಬಂದು ಶೌಚಾಲಯ ಶುಚಿಗೊ ಳಿಸುತ್ತಿದ್ದಾರೆ ಎಂದು ವಾರ್ಡನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ಹೆಣ್ಣು ಮಕ್ಕಳು ಇರುವ ಹಾಸ್ಟೆಲ್‌ನ ಶೌಚಾಲಯವನ್ನು ಪ್ರತಿದಿನ ಕ್ಲೀನ್ ಮಾಡಬೇಕು. ಅವರಿಗೆ ನೀಡುವ ಸಂಬಳದಲ್ಲಿ ಏರಿಕೆ ಮಾಡಿ ಪ್ರತಿದಿನ ಬರುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ವೈದ್ಯರ ವಿರುದ್ಧ ದೂರು

ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್, ಪುರುಷರ ಹಾಗೂ ಮಹಿಳಾ ವಾರ್ಡ್ ಮತ್ತು ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ಘಟಕ, ಔಷಧ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿದ ಉಪಲೋಕಾಯುಕ್ತರು, ದೂರು ಪೆಟ್ಟಿಗೆಗಳಲ್ಲಿನ ದೂರುಗಳನ್ನು ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಗುಟ್ಕಾ ಉಗಿಯುವ ಮತ್ತು ಮದ್ಯದ ಪ್ಯಾಕೆಟ್ ಎಸೆಯುವವರ ವಿರುದ್ಧ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂಬ ಸಾರ್ವಜನಿಕರ ಪತ್ರವನ್ನು ವಾಚಿಸಿದ ಉಪಲೋಕಾಯುಕ್ತರು, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಡಾ.ಕೆ.ಅರುಣ್ ಅವರಿಗೆ ಸೂಚಿಸಿದರು.

ದೂರು ಪೆಟ್ಟಿಗೆಯಲ್ಲಿದ್ದ ಎರಡು ಪತ್ರಗಳಲ್ಲಿ ಆಸ್ಪತ್ರೆಯ ಮಾನಸಿಕ ತಜ್ಞ ವೈದ್ಯರು ರೋಗಿಗಳು ಬಂದಾಗ ದೊರೆಯುತ್ತಿಲ್ಲ ಎಂದು ದೂರಲಾಗಿತ್ತು. ಇದನ್ನು ಗಮನಿಸಿದ ಉಪಲೋಕಾಯುಕ್ತರು, ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಜರಗಿಸು ವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಇದೆಯೇ ಎಂದು ಜಿಲ್ಲಾ ಸರ್ಜನ್ ಡಾ.ವೀಣಾ ಶೆಟ್ಟಿ ಅವರನ್ನು ಪ್ರಶ್ನಿಸಿದ ಉಪಲೋಕಾಯುಕ್ತರು, ಆಸ್ಪತ್ರೆಯ ಸುತ್ತಮುತ್ತಲು ಕ್ಲೀನಿಂಗ್ ಮಾಡಿ ಇಡೀ ಪರಿಸರವನ್ನು ಸ್ವಚ್ಛವಾಗಿ ಇಡಬೇಕು ಎಂದು ಪೌರಾಯುಕ್ತರಿಗೆ ಸೂಚನೆ ನೀಡಿದರು. ರೋಗಿಗಳಿಂದ ಚಿಕಿತ್ಸೆ, ಊಟದ ವ್ಯವಸ್ಥೆ, ಔಷಧಗಳ ನೀಡುವಿಕೆ ಬಗ್ಗೆ ಮಾಹಿತಿಯನ್ನು ಸಹ ಪಡೆದರು.

ಮಕ್ಕಳಿಗೆ ಚಾಕಲೇಟ್ ಹಂಚಿದರು

ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿದ ಉಪಲೋಕಾ ಯುಕ್ತರು, ಅಲ್ಲಿನ ನಿವಾಸಿಗಳೊಂದಿಗೆ ಸಮಾ ಲೋಚನೆ ನಡೆಸಿದರು. ತಮಗೆ ಅಗತ್ಯ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಅಲ್ಲೇ ಇದ್ದ ಮಕ್ಕಳಿಗೆ ಸಿಬ್ಬಂದಿಯಿಂದ ಚಾಕಲೇಟ್ ಖರೀದಿಸಿ ತರಿಸಿ ವಿತರಿಸಿದರು.

ಮಹಿಳಾ ನಿಲಯದಲ್ಲಿರುವ ವಿದ್ಯಾರ್ಥಿಗಳ ಬೇಡಿಕೆಯಂತೆ ಪುಸ್ತಕ ಇಡಲು ಕಪಾಟು ಮತ್ತು ಕಂಪ್ಯೂಟರ್ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚಿಸಿದರು. ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿ ರುವ ಬಗ್ಗೆ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುತ್ತಿರುವ ಊದುಬತ್ತಿ ತಯಾರಿಕರಿಗೆ ಕೆ.ಜಿ.ಗೆ 12 ರೂ. ಹಾಗೂ ಹುಣಸೇ ಹಣ್ಣು ಬಿಡಿಸು ವವರಿಗೆ ಒಂದು ಕೆ.ಜಿ.ಗೆ ಆರು ರೂ. ನೀಡುತ್ತಿದ್ದು ಇದರ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಜಿಪಂ ಸಿಇಓ ಪ್ರತೀಕ್ ಬಯಾಲ್, ಎಸ್ಪಿ ಡಾ.ಅರುಣ್ ಕೆ., ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ.ಸೈಮನ್, ರಾಜ್ಯ ಲೋಕಾಯುಕ್ತ ಉಪನಿಬಂಧಕ ಎಂ.ವಿ.ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಕುಂದಾಪುರ ಎಸಿ ರಶ್ಮಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿ ಗಳು ಉಪಸ್ಥಿತರಿದ್ದರು.

‘ಉಡುಪಿ ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಲು, ಹೊಸದಾಗಿ ನ್ಯೂರೋಲಾಜಿ, ನೆಪ್ರೋಲಾಜಿ ಕಾರ್ಡಿಯೋಲಜಿ ವಿಭಾಗಗಳನ್ನು ತೆರೆಯುವ ಬಗ್ಗೆ ಜಿಲ್ಲಾ ಸರ್ಜನ್ ಪತ್ರವನ್ನು ನೀಡಿದರೆ ಈ ಕುರಿತು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು’ -ನ್ಯಾ.ಕೆ.ಎನ್.ಫಣೀಂದ್ರ, ಉಪಲೋಕಾಯುಕ್ತರು

ಸಿಬ್ಬಂದಿಗೆ ಸಂಬಳ ನೀಡಲು ಕ್ರಮ

ರಾಜ್ಯ ನಿಲಯದಲ್ಲಿ ಕಳೆದ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಸಂಬಳ ಬಂದಿಲ್ಲ ಎಂದು ಮಹಿಳಾ ಸಿಬಂದಿ ಉಪಲೋಕಾಯುಕ್ತರಲ್ಲಿ ದೂರಿದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಉಪಲೋಕಾಯುಕ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಕರೆದು ಏಜೆನ್ಸಿಯವರನ್ನು ವಿಚಾರಿಸಿ ಪ್ರತಿ ತಿಂಗಳು ಸರಿಯಾಗಿ ಸಂಬಳ ನೀಡಲು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು. ಇದೇ ವೇಳೆ ಉಪಲೋಕಾಯುಕ್ತರು, ರಾಜ್ಯ ನಿಲಯದ ಅಡುಗೆ ಕೋಣೆ, ಅಡುಗೆ ಹಾಗೂ ಸ್ಟೋರ್ ರೂಮ್‌ ಗಳನ್ನು ಪರಿಶೀಲನೆ ನಡೆಸಿದರು.

ಪೌಷ್ಠಿಕ ಆಹಾರ ನೀಡಲು ಸೂಚನೆ

ಹಾಸ್ಟೆಲ್‌ನಲ್ಲಿರುವ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ, ಸ್ವಚ್ಛ ವಾತಾವರಣ ನಿರ್ಮಿಸುವ ಜೊತೆಗೆ ಅವರ ಶಿಕ್ಷಣಕ್ಕೆ ಅನುಕೂಲ ವಾಗುವ ಗ್ರಂಥಾಲಯ, ಕಂಪ್ಯೂಟರ್ ಹಾಗೂ ಉನ್ನತ ಜ್ಞಾನಾರ್ಜನೆಗಾಗಿ ಸ್ಪರ್ಧಾತ್ಮಕ, ನಾಗರಿಕ ಸೇವಾ ಪರೀಕ್ಷೆ ಎದುರಿಸಲು ಮಾಸಿಕ ವಿಶೇಷ ಉಪನ್ಯಾಸ, ಪುಸ್ತಕಗಳ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ಪಡೆದ ಉಪಲೋಕಾಯುಕ್ತರು, ಸೂಕ್ತ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕಂಪ್ಯೂಟರ್ ಜ್ಞಾನದ ಬಗ್ಗೆ ಮಕ್ಕಳಿಗೆ ಅರ್ಥೈಸುವ ಉಪನ್ಯಾಸಕರನ್ನು ಕರೆಸಿ ತಿಳಿಯುವ ರೀತಿಯಲ್ಲಿ ಪಾಠ ಹೇಳಲು ತಿಳಿಸಿದ ಅವರು, ನಗರಸಭೆ ವತಿಯಿಂದ ವಿದ್ಯಾರ್ಥಿ ನಿಲಯಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳ ಬೇಕೆಂದು ಪೌರಾಯಕ್ತರಿಗೆ ಸೂಚನೆ ನೀಡಿದರು.







Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News