ಕಂಬಳ ಕ್ರೀಡೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ ಯಶಸ್ವಿ: ಅದಾನಿ ಫೌಂಡೇಶನ್ ಕೊಡುಗೆ ಐಕಳ ಕಂಬಳದಲ್ಲಿ ಉದ್ಘಾಟನೆ
ಪಡುಬಿದ್ರೆ, ಫೆ.4: ಕರಾವಳಿಯ ಜನಪ್ರಿಯ ಗ್ರಾಮೀಣ ಜಾನಪದ ಕ್ರೀಡೆ ಎನಿಸಿದ ಕಂಬಳಕ್ಕೆ ಇದೀಗ ಹೈಟೆಕ್ ತಂತ್ರ ಜ್ಞಾನದ ಸ್ಪರ್ಶವಾಗಿದೆ. ಶನಿವಾರ ಮೂಲ್ಕಿಯಲ್ಲಿ ನಡೆದ 48ನೇ ಐಕಳ ಕಂಬಳೋತ್ಸವವೇ ಇದರ ಅಳವಡಿಕೆಗೆ ಸಾಕ್ಷಿಯಾಯಿತು.
ಪಡುಬಿದ್ರಿಯ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್‌ನ ಅದಾನಿ ಸಮೂಹ ಸಂಸ್ಥೆಯು ಕಂಬಳಕ್ಕೆ ಆಧು ನಿಕ ತಂತ್ರಜ್ಞಾನವನ್ನು ಅಳವಡಿಸಲು ಉಡುಪಿ, ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿಗೆ 10 ಲಕ್ಷ ರೂ. ಅನುದಾನ ನೀಡಿದ್ದು, ಈ ಅನುದಾನಡಿಯಲ್ಲಿ ಕೋಣಗಳ ಓಟದ ಪ್ರಾರಂಭಿಕ ಹಂತದಲ್ಲಿ ಸ್ವಯಂಚಾಲಿತ ಸಮಯಗೇಟ್ ಹಾಗೂ ಓಟದ ಸಮಾಪ್ತಿಯಲ್ಲಿ ಪೋಟೊ ಫಿನಿಶ್ ಫಲಿತಾಂಶ ವ್ಯವಸ್ಥೆಗಳನ್ನು ಶನಿವಾರ ನಡೆದ ಐಕಳ ಕಂಬಳದಲ್ಲಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಇದು ಯಶಸ್ವಿಯಾಗಿ ಕಾರ್ಯಾಚರಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಹೈಟೆಕ್ ತಂತ್ರಾಂಶವಾದ ಸ್ವಯಂಚಾಲಿತ ಸಮಯಗೇಟನ್ನು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಉಪಸ್ಥಿತಿಯಲ್ಲಿ ಉದ್ಘಾಟಿಸಿದರೆ, ಪೋಟೊ ಫಿನಿಶ್ ಫಲಿತಾಂಶದ ವ್ಯವಸ್ಥೆ ಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅದಾನಿ ಸಮೂಹದ ಕಿಶೋರ್ ಆಳ,್ವ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡೆ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುತ್ತಾ ಬಂದಿರುವ ಅದಾನಿ ಸಮೂಹದ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಷನ್ ವತಿಯಿಂದ ಕಂಬಳ ಕ್ರೀಡೆಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ 10 ಲಕ್ಷ ರೂ. ಶೇಷ ಅನುದಾನವನ್ನು ಜಿಲ್ಲಾ ಕಂಬಳ ಸಮಿತಿಗೆ ನೀಡಿತ್ತು. ಹೈಟೆಕ್ ವ್ಯವಸ್ಥೆಯು ಐಕಳ ಕಂಬಳೋತ್ಸವದಲ್ಲಿ ಯಶಸ್ವಿಯಾಗಿ ಉದ್ಘಾಟನೆ ಗೊಂಡಿದೆ. ಇದರಿಂದ ಜಿಲ್ಲೆಯ ಕಂಬಳ ಪ್ರೇಮಿಗಳು ಹಾಗೂ ಆಯೋಜಕರಿಗೆ ಖುಷಿಯಾಗಿದೆ ಎಂದರು.
ಈ ವ್ಯವಸ್ಥೆಗಳಿಂದ ಕಂಬಳದ ಸಮಯ ಪೋಲಾಗದಂತೆ ಹಾಗೂ ನಿಖರ ಫಲಿತಾಂಶವನ್ನು ತಿಳಿಯಬಹುದಾಗಿದೆ. ಅಲ್ಲದೇ ಇತಿಹಾಸ ಪ್ರಸಿದ್ಧ ಕಂಬಳ ಕ್ರೀಡೆಯು ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯತೆ ಪಡೆಯಲು ಸಾಧ್ಯವಾಗಲಿದೆ. ಈ ತಂತ್ರಜ್ಞಾನವನ್ನು ಮುಂಬರುವ ದಿನಗಳಲ್ಲಿ ಇನ್ನಷ್ಟು ಉನ್ನತದರ್ಜೆಗೆ ನವೀಕರಿಸಬೇಕು ಎಂದು ಕಿಶೋರ್ ಆಳ್ವ ತಿಳಿಸಿದರು.
ಕೋಟ ಶ್ರೀನಿವಾಸ ಪೂಜಾರಿ ಹಾಗೂ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರೂ ಮಾತನಾಡಿ, ಆಧುನಿಕ ತಂತ್ರ ಜ್ಞಾನದ ಅಳವಡಿಕೆಯಿಂದ ಕಂಬಳ ಕ್ರೀಡೆಗೆ ಇತ್ತಷ್ಟು ಮೆರುಗು ದೊರೆಯುವಂತಾಗಿದೆ. ಈಗಾಗಲೇ ರಾಜ್ಯದ ರಾಜಧಾನಿ ಯಲ್ಲಿ ತನ್ನ ವೈಶಿಷ್ಟ್ಯ ಮೆರೆದಿರುವ ಕಂಬಳ, ಮುಂದಿನ ದಿನಗಳಲ್ಲಿ ದೇಶ-ವಿದೇಶಗಳಲ್ಲೂ ತನ್ನ ಛಾಪನ್ನು ಮೂಡಿಸು ವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಕಂಬಳ ಕ್ರೀಡೆಗೆ ಹೈಟೆಕ್ ಸ್ಪರ್ಶ ನೀಡಲು ನೆರವಾದ ಅದಾನಿ ಸಮೂಹಕ್ಕೆ ಅಭಿನಂದನೆ ಸಲ್ಲಿಸಿದರು.