ಮಲ್ಪೆ ಬಂದರಿನ ಎಲ್ಲಾ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪ್ರಯತ್ನ: ಮೀನುಗಾರರಿಗೆ ಮಂಕಾಳ ವೈದ್ಯರ ಭರವಸೆ
ಮಲ್ಪೆ: ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರು ಸಚಿವರಾಗಿ ಅಧಿ ಕಾರ ಸ್ವೀಕರಿಸಿದ ಬಳಿಕ ಇಂದು ಮಲ್ಪೆ ಮೀನುಗಾರಿಕೆ ಬಂದರಿಗೆ ಪ್ರಥಮ ಬಾರಿಗೆ ಭೇಟಿ ನೀಡಿ ಸ್ಥಳೀಯ ಮೀನುಗಾರರು, ಮಹಿಳಾ ಮೀನುಗಾರರು ಹಾಗೂ ಮೀನುಗಾರರ ಸಂಘದ ಪದಾಧಿಕಾರಿಗಳೊಂದಿಗೆ ವ್ಯಾಪಕ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಪೆ ಬಂದರನ್ನು ಅವಲೋಕಿಸಿದಾಗ ಬಂದರಿನಲ್ಲಿ ಬೋಟ್ ಎಳೆಯಲು, ಬಂದರಿನಲ್ಲಿ ನಿಲ್ಲಿಸಲು, ಹಾಗೂ ಹಿಡಿದ ಮೀನುಗಳನ್ನು ಒಣಗಿಸಲು ಸಮಸ್ಯೆ ಇರುವುದು ಗೊತ್ತಾ ಗಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ನೀಲನಕ್ಷೆಯನ್ನು ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇಲ್ಲಿನ ಎಲ್ಲಾ ಸಮಸ್ಯೆ ಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
2017-18ನೇ ಸಾಲಿನಿಂದ ಮೀನುಗಾರಿಕೆ ಮತ್ತು ಬಂದರು ಇಲಾಖೆಯಲ್ಲಿ ಕೇಂದ್ರ ಹಾಗೂ ರಾಜ್ಯದ ಸುಮಾರು 1800 ಕೋಟಿ ರೂ.ಗಳಷ್ಟು ಅನುದಾನ ಖರ್ಚಾಗದೇ ಉಳಿದುಕೊಂಡಿದೆ. ಇಲಾಖೆಯ ಮೂಲಕ ವಿವಿಧ ಕಾಮಗಾರಿಗಾಗಿ ಈ ಅನುದಾನ ಬಿಡುಗಡೆಯಾಗಿದ್ದು, ಸಿಆರ್‌ಝಡ್ ಕಾಯ್ದೆ ಯ ತಾಂತ್ರಿಕ ಸಮಸ್ಯೆಗಳಿಂದಾಗಿ ಕಾಮಗಾರಿ ನಡೆಸಲು ಸಾಧ್ಯ ವಾಗಿಲ್ಲ ಎಂದು ಅವರು ತಿಳಿಸಿದರು.
ಇದೀಗ ರಾಜ್ಯ ಸರಕಾರ ಕರಾವಳಿಯ ಮೂರು ಜಿಲ್ಲೆಗಳ ವ್ಯಾಪ್ತಿಯ ಒಟ್ಟು 320ಕಿ.ಮೀ. ಉದ್ದದ ಕಡಲ ತೀರದ ಸಿಆರ್‌ಝಡ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮವನ್ನು ಕೈಗೊಂಡಿದ್ದು, ಇದಕ್ಕೆ ಕೇಂದ್ರದಿಂದ ಅನುಮೋದನೆ ದೊರೆತ ತಕ್ಷಣ ಸಮಸ್ಯೆ ಬಗೆಹರಿದು ಇಲಾಖೆಯ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.
ಬಂದರಿನಲ್ಲಿ ಬಹುಕಾಲದಿಂದ ಹೂಳು ತುಂಬಿದ್ದು, ಬೋಟುಗಳ ಸರಾಗ ಸಂಚಾರಕ್ಕೆ ತಡೆ ಉಂಟಾಗುತ್ತಿದೆ. ಈಗಾಗಲೇ 3 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಡ್ರೆಜ್ಜಿಂಗ್ ಕಾಮಗಾರಿ ನಡೆಯುತ್ತಿದೆ. ಮಲ್ಪೆ ಬಂದರಿನಲ್ಲಿ ಶೇ.70ರಷ್ಟು ಡ್ರೆಜ್ಜಿಂಗ್ ಮುಗಿದಿದೆ. ಬೋಟುಗಳ ಸುಗಮ ಸಂಚಾರಕ್ಕೆ ಬಂದರಿನಲ್ಲಿ ವರ್ಷಪೂರ್ತಿ ಹೂಳು ಎತ್ತಬೇಕೆಂಬ ಬೇಡಿಕೆ ಇದೆ. ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಂದರೆ ಪಿ.ಪಿ.ಪಿ ಮಾಡೆಲ್‌ನಲ್ಲಿ ಡ್ರೆಜ್ಜಿಂಗ್ ಯಂತ್ರವನ್ನು ಖರೀದಿಸುವ ಚಿಂತನೆ ನಡೆದಿದೆ ಎಂದರು.
ಮಲ್ಪೆ ಬಂದರಿನಲ್ಲಿ ಈಗಿರುವ ಎಲ್ಲಾ ಬೋಟುಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇದ್ದು, ಇದನ್ನು ವಿಸ್ತರಿಸಲು ಮೀನುಗಾರರ ಬೇಡಿಕೆ ಇದೆ. ಸ್ಥಳೀಯ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕಾರ್ಯೋನ್ಮುಖ ರಾಗುತ್ತೇವೆ ಎಂದು ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದರು.
ಬಹು ಸಮಯದಿಂದ ಮೀನುಗಾರರಿಂದ ಸೀ-ಆಂಬುಲೆನ್ಸ್ ವ್ಯವಸ್ಥೆಗೆ ವ್ಯಾಪಕ ಬೇಡಿಕೆ ಇದೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡುವ ನಿರೀಕ್ಷೆ ಇದೆ. ಮೀನುಗಾರರಿಗೆ ಹಾಗೂ ಮೀನುಗಾರ ಮಹಿಳೆಯರಿಗೆ ಅನುಕೂಲವಾಗುವಂತೆ ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸುವುದಾಗಿ ಹೇಳಿದರು.
ನಮ್ಮ ಸಿದ್ಧರಾಮಯ್ಯ ನೇತೃತ್ವದ ಸರಕಾರ ಮೀನುಗಾರರ ಪರವಾಗಿದ್ದು ಮೀನುಗಾರಿಕೆಗೆ ಪೂರಕವಾಗುವಂತಹ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲು, ಅಭಿವೃದ್ಧಿಗಳನ್ನು ಹಾಗೂ ಯೋಜನೆಗಳನ್ನು ಮಾಡಲು ಬದ್ದವಾಗಿದೆ ಎಂದು ವೈದ್ಯ, ಮೀನುಗಾರಿಕೆ ಎಂಬುದು ಅತ್ಯಂತ ಸವಾಲಿನ ವೃತ್ತಿ ಎಂಬುದು ಅದೇ ಸಮಾಜದಿಂದ ಬಂದಿರುವ ನನಗೆ ತಿಳಿಸಿದಿದೆ. ಹೀಗಾಗಿ ಮೀನುಗಾರರ ಎಲ್ಲಾ ಕಷ್ಟಗಳನ್ನು, ಸಮಸ್ಯೆಗಳನ್ನು ಅರಿತಿರುವ ನಾನು ಅವರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಅವರು ಮೀನುಗಾರರಿಗೆ ಹಾಗೂ ಮಹಿಳೆಯರಿಗೆ ಆಶ್ವಾಸನೆ ನೀಡಿದರು.