ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಪ್ರತಿಭಟನೆ ನಾಟಕ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಕಾಂಗ್ರೆಸ್ ಸರಕಾರವು. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರಿಗೆ ವಂಚಿಸಿ ಅಧಿಕಾರ ಪಡೆದಿದ್ದು, ಇದೀಗ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಪ್ರತಿಭಟನೆಯ ನಾಟಕವಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಟೀಕಿಸಿದ್ದಾರೆ.
ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಮಂಗಳವಾರ ಜರಗಿದ ಉಡುಪಿ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಚಿತ ಬಸ್ ಯೋಜನೆ ವ್ಯವಸ್ಥಿತವಾಗಿ ಜಾರಿಗೊಳಿಸದೇ, ಹೆಚ್ಚುವರಿ ಬಸ್ ಬಿಡದ ಪರಿಣಾಮ ಇಂದು ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ. 9.50 ಲಕ್ಷ ಕುಟುಂಬಗಳಿಗೆ ಗೃಹ ಲಕ್ಷ್ಮೀ ಯೋಜನೆ ಪ್ರಥಮ ಕಂತು ಇನ್ನೂ ಸಿಕ್ಕಿಲ್ಲ. ಯುವನಿಧಿ ಯೋಜನೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಅವರು ಆರೋಪಿಸಿದರು.
ಯುಪಿಎ ಸರಕಾರ ರಾಜ್ಯಕ್ಕೆ ೫೬ ಸಾವಿರ ಕೋ. ರೂ. ಅನುದಾನ ನೀಡಿದ್ದರೆ, ಎನ್‌ಡಿಎ 2.50 ಲಕ್ಷ ರೂ. ಅನುದಾನ ನೀಡಿದೆ. ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಬಿಜೆಪಿ ಹಾಗೂ ಮೋದಿಯನ್ನು ವಿರೋಧಿಸಲೇ ಬೇಕು ಎಂಬ ಹಠದಿಂದ ಸುಳ್ಳು ಆರೋಪ ಮಾಡಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ ಎಂದು ಅವರು ದೂರಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ. ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕೂಡ್ಗಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ-ಚಿಕ್ಕಮಗಳೂರು ಚುನಾವಣೆ ಉಸ್ತುವಾರಿ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ್ ಶೆಟ್ಟಿ ಹೆರ್ಗ ಸ್ವಾಗತಿಸಿದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.