ವಿಶ್ವ ಕ್ಯಾನ್ಸರ್ ದಿನ: ಮಣಿಪಾಲ ಕೆಎಂಸಿಯಿಂದ ಮಾನವ ಸರಪಳಿ
ಮಣಿಪಾಲ: ವಿಶ್ವ ಕ್ಯಾನ್ಸರ್ ದಿನದ ಸಂದರ್ಭದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಮಣಿಪಾಲ್ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಹಯೋಗದೊಂದಿಗೆ ಮಾನವ ಸರಪಳಿಯ ಮೂಲಕ ಐಕಾನಿಕ್ ಕ್ಯಾನ್ಸರ್ ಜಾಗೃತಿ ರಿಬ್ಬನ್‌ನ್ನು ರಚಿಸಿತು.
ಕೆಎಂಸಿಯ ವೈದ್ಯರು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಕ್ಯಾನ್ಸರ್ ಕುರಿತಂತೆ ಜನರಲ್ಲಿ ಇರುವ ಮೂಢನಂಬಿಕೆಗಳು, ತಪ್ಪುಗ್ರಹಿಕೆಗಳನ್ನು ಹೋಗಲಾಡಿಸುವ ಮತ್ತು ಕ್ಯಾನ್ಸರ್ ಕಾಯಿಲೆಯ ಚಿಹ್ನೆಗಳು, ಲಕ್ಷಣಗಳು ಮತ್ತು ಅಪಾಯಕಾರಿ ಅಂಶಗಳ ಬಗ್ಗೆ ಸಮುದಾಯಕ್ಕೆ ಶಿಕ್ಷಣ ನೀಡುವ ಗುರಿಯೊಂದಿಗೆ ಕ್ಯಾನ್ಸರ್ ಜಾಗೃತಿ ರಿಬ್ಬನ್‌ನ್ನು ರಚಿಸಿದರು.
ಪ್ರತಿ ವರ್ಷ ಫೆ.೪ರಂದು, ವಿಶ್ವ ಕ್ಯಾನ್ಸರ್ ದಿನವಾಗಿದ್ದು, ಈ ದಿನದಂದು ಕ್ಯಾನ್ಸರ್ ಕಾಯಿಲೆ ಕುರಿತು ಜಾಗೃತಿ ಹಾಗೂ ತಿಳುವಳಿಕೆ ಮೂಡಿಸಲಾಗುತ್ತದೆ. ಇದಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು, ಸಕಾಲದಲ್ಲಿ ತಪಾಸಣೆ ಅಗತ್ಯತೆ, ಆರಂಭಿಕ ಪತ್ತೆ, ಉತ್ತಮ ಚಿಕಿತ್ಸೆ ಮತ್ತು ಉಪಶಾಮಕ ಆರೈಕೆ ಮೂಲಕ ಕ್ಯಾನ್ಸರ್ ಅನ್ನು ನಿಯಂತ್ರಿಸಬಹುದು, ಅಲ್ಲದೇ ತಡೆಗಟ್ಟಲು ಸಾಧ್ಯವಿದೆ ಎಂಬುದನ್ನು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮನವರಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ್ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಹಯೋಗದೊಂದಿಗೆ ರೂಪಿಸಿದ ಮಾನವ ಸರಪಳಿ ರಚನೆಯು ಕೇವಲ ಸಾಂಕೇತಿಕ ಕಾರ್ಯಕ್ರಮವಲ್ಲ, ಇದು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮತ್ತು ತಡೆಗಟ್ಟುವ ಸಂಸ್ಕೃತಿಯನ್ನು ಬೆಳೆಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.