×
Ad

ಮಂಗನಕಾಯಿಲೆ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸಿ: ಡಿಸಿ ಡಾ. ವಿದ್ಯಾಕುಮಾರಿ

Update: 2024-02-06 21:16 IST

ಉಡುಪಿ: ನಮ್ಮ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ವ್ಯಾಪಕವಾಗಿ ಕಾಣಿಸಿಕೊ ಳ್ಳುತಿದ್ದು, ಇದರಿಂದ ಉಡುಪಿ ಜಿಲ್ಲೆಯಲ್ಲೂ ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ, ಕಾಡು ಹಾಗೂ ಕಾಡಿನಂಚಿನಲ್ಲಿರುವ ಗ್ರಾಮಗಳ ಗ್ರಾಪಂಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರಿಗೆ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕಾಡಿನಲ್ಲಿ ಮಂಗಗಳು ಸತ್ತು, ಅವುಗಳ ದೇಹದಿಂದ ಹೊರಬರುವ ಉಣ್ಣಿಗಳಿಂದ ಮಂಗನಕಾಯಿಲೆ ಹರಡುತ್ತದೆ. ಹೀಗಾಗಿ, ಕಾಡಿನಲ್ಲಿ ಮಂಗಗಳು ಸತ್ತಾಗ ಅವುಗಳನ್ನು ಸರಕಾರದ ಮಾರ್ಗಸೂಚಿ ಅನ್ವಯ ವಿಲೇವಾರಿ ಮಾಡಬೇಕು ಹಾಗೂ ಮಂಗಗಳು ಸತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಕಾಡಂಚಿನಲ್ಲಿರುವ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿ ಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶು ಪಾಲನಾ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಿ, ಈ ಕಾಯಿಲೆ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು. ಕಾಡಿಗೆ ತೆರಳುವವರು ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಿಂದ ಇದುವರೆಗೆ ಮಂಗನಕಾಯಿಲೆಯ ಯಾವುದೇ ಪ್ರಕರಣ ವರದಿಯಾಗಿಲ್ಲ. ಈವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 47 ಪ್ರಕರಣಗಳು ವರದಿಯಾಗಿದ್ದು ಸಾಗರ ಮತ್ತು ತೀರ್ಥಹಳ್ಳಿಯ ಇಬ್ಬರು ಮೃತಪಟ್ಟಿದ್ದಾರೆ. ಉತ್ತರ ಕನ್ನಡದಲ್ಲೂ 22 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಒಬ್ಬರು ಮೃತ ಪಟ್ಟಿದ್ದಾರೆ. ಸಾಗರದ ವ್ಯಕ್ತಿ ಕೊನೆ ಕ್ಷಣದಲ್ಲಿ ಮಣಿಪಾಲಕ್ಕೆ ದಾಖಲಾಗಿದ್ದು ಮರುದಿನ ಮೃತಪಟ್ಟಿದ್ದಾರೆ ಎಂದು ಡಿಎಚ್‌ಓ ಡಾ.ಐ.ಪಿ.ಗಡಾದ್ ತಿಳಿಸಿದರು.

ಎಲ್ಲರಿಗೂ ಪೊಲಿಯೋ ಲಸಿಕೆ ಹಾಕಿಸಿ: ಮಾರ್ಚ್ 3ರಂದು ಜಿಲ್ಲೆ ಯಾದ್ಯಂತ 0-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೊ ಲಸಿಕೆಯನ್ನು ನೀಡಲಾಗುತ್ತಿದ್ದು, ಜಿಲ್ಲೆಯ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈಗಾಗಲೇ ದೇಶದಲ್ಲಿ ಪಲ್ಸ್ ಪೊಲಿಯೋ ಪ್ರಕರಣಗಳು ಶೂನ್ಯವಿದ್ದರೂ ಸಹ, ಯಾವುದೇ ಮಕ್ಕಳಿಗೆ ಬರಬಾರದು ಎಂಬ ಉದ್ದೇಶದಿಂದ ಪೊಲಿಯೋ ಲಸಿಕೆಯನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ಮಕ್ಕಳಿಗೂ ಪೊಲೀಯೋ ಲಸಿಕೆ ಹನಿಯನ್ನು ಹಾಕಿಸಿ, ಪ್ರತಿಶತಃ ನೂರರಷ್ಟು ಸಾಧಿಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ಲಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಯಾವುದೇ ರೋಗ ಬಂದು ಚಿಕಿತ್ಸೆ ನೀಡುವ ಬದಲು ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣಗಳಾದ ರೋಗ ಹರಡುವಿಕೆ, ಅವುಗಳ ಲಕ್ಷಣ, ತೆಗೆದುಕೊಳ್ಳಬೇಕಾದ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಿ, ರೋಗಗಳು ಹರಡದಂತೆ ಎಚ್ಚರಿಕೆ ವಹಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್‌ಗಳನ್ನು ಪ್ರತಿಯೊಬ್ಬ ಫಲಾನುಭವಿಗಳಿಗೂ ವಿತರಿಸಲಾ ಗುತ್ತಿದೆ. ಇದರಿಂದ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ಸೇವೆಗಳನ್ನು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ ಗಳಲ್ಲಿ ಪಡೆಯಬಹುದು. ಪ್ರತಿಯೊಬ್ಬರೂ ಆರೋಗ್ಯ ಕಾಡರ್ರ್ಗಳನ್ನು ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಎಂಡೋಸಲ್ಫಾನ್ ಬಾಧಿತರಿಗೆ ಚಿಕಿತ್ಸೆ: ಎಂಡೋಸಲ್ಫಾನ್ ಬಾದಿತರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿ 1846 ಎಂಡೋಸಲ್ಫಾನ್ ಪೀಡಿತರಿದ್ದು, ಅವರಲ್ಲಿ 158 ಮಂದಿ ಸಾವನ್ನಪ್ಪಿದ್ದಾರೆ. 1649 ರೋಗಿಗಳಿಗೆ ಪ್ರತೀ ತಿಂಗಳು ಮಾಸಾಶನವನ್ನು ನೀಡಲಾಗುತ್ತಿತ್ತು. ಆದರೆ ಕಳೆದೆರೆಡು ತಿಂಗಳಿನಿಂದ ಮಾಸಾಶನ ಸಿಗುತ್ತಿಲ್ಲ ಎಂಬ ಬಗ್ಗೆ ದೂರುಗಳೂ ಕೇಳಿಬರುತ್ತಿವೆ. ಕೆಲವರು ಇ-ಕೆವೈಸಿ ಮಾಡದೇ ಇದ್ದರೂ ಸಹ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗಳು ಈ ಬಗ್ಗೆ ಪರಿಶೀಲಿಸಿ, ಪ್ರತಿಯೊಬ್ಬರಿಗೂ ಮಾಸಾಶನ ದೊರೆಯುವಂತೆ ಕ್ರಮ ವಹಿಸಬೇಕೆಂದು ಡಿಸಿ ಸೂಚನೆ ನೀಡಿದರು.

ಎಂಡೋಸಲ್ಫಾನ್ ಬಾಧಿತರಿಗೆ ಮನೆಯಲ್ಲಿಯೇ ಫಿಸಿಯೋಥೆರಪಿ ಆರೈಕೆ ನೀಡಲು ಪೋಷಕರುಗಳಿಗೆ ಕಾರ್ಯಾಗಾರ ಗಳನ್ನು ಆಯೋಜಿಸಬೇಕು ಎಂದ ಅವರು, ಅನಾಥ, ಎಂಡೋಸಲ್ಫಾನ್ ಬಾಧಿತರಿಗೆ ಆರೈಕೆ ಮಾಡಲು ಹಾಗೂ ಹಗಲು ಯೋಗಕ್ಷೇಮಗಳನ್ನು ನೋಡಿಕೊಳ್ಳಲು ಬೈಂದೂರಿನ ಕಿರಿಮಂಜೇಶ್ವರ ಅಥವಾ ನಾಡ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾಲನಾ ಕೇಂದ್ರವನ್ನು ತೆರೆಯಲು, ಮುಚ್ಚಿಹೋಗಿರುವ ಶಾಲಾ ಕಟ್ಟಡವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.




 



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News