ಕಾರ್ಕಳ ಸರಕಾರಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹಿಸಿ ಡಿಸಿಗೆ ಮನವಿ
ಉಡುಪಿ: ಕಾರ್ಕಳ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಖಾಲಿ ಹುದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಸೀಕ್ರೆಟ್ ಆಫ್ ಸಕ್ಸಸ್ ವಿಮೆನ್ ಎಂಪವರ್ಮೆಂಟ್ ಕಾರ್ಕಳ ತಾಲೂಕು ವತಿಯಿಂದ ಇಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ 2023ರ ಸೆ.8ರಿಂದ ಯಾವುದೇ ಮಹಿಳಾ ಪ್ರಸೂತಿ ತಜ್ಞರು ಕಾರ್ಯನಿರ್ವಹಿಸುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರುಗಳಿಲ್ಲದೆ ಗರ್ಭಿಣಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷ ಚೇತನರು ಮತ್ತು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿ ಯಾವುದೇ ಸೌಲಭ್ಯಗಳಿಲ್ಲದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಆದುದರಿಂದ ಸ್ತ್ರೀರೋಗ ತಜ್ಞರು, ಪುರುಷ ವೈದ್ಯರು, ಎಲುಬು ತಜ್ಞರು ಹಾಗೂ ಖಾಲಿ ಇರುವ ಹುದ್ದೆಗಳಾದ ಪ್ರಾಥಮಿಕ ಸುರಕ್ಷಾ ಅಧಿಕಾರಿಗಳನ್ನು ಕೂಡಲೇ ಭರ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸೀಕ್ರೆಟ್ ಆಫ್ ಸಕ್ಸಸ್ ವಿಮೆನ್ ಎಂಪವರ್‌ಮೆಂಟ್ ಸ್ಥಾಪಕರಾದ ರಾಜೇಶ್ವರಿ ಎನ್. ಹಾಗೂ ಸುನೀತಾ ಸುಧಾಕರ್, ಸಹಸ್ಥಾಪಕಿ ಭಾರತಿ ಅಮೀನ್, ಕಾರ್ಕಳ ತಾಲೂಕು ಅಧ್ಯಕ್ಷೆ ಸುಜಾತ ಎಸ್., ಗೌರವಾಧ್ಯಕ್ಷೆ ಸುನಿತಾ ಎ.ಶೆಟ್ಟಿ, ಸದಸ್ಯರುಗಳಾದ ಪ್ರಭಾ, ಮಮತಾ, ಮಂಜುಳಾ, ಶಕುಂತಲಾ ಮೊದಲಾದವರು ಉಪಸ್ಥಿತರಿದ್ದರು.