×
Ad

ಉಡುಪಿ ಜಿಲ್ಲೆಗೆ ಎಂಡೋಸಲ್ಫಾನ್ ಆರೈಕೆ ಕೇಂದ್ರ; ಬಜೆಟ್‌ನಲ್ಲಿ ಮಂಜೂರಾತಿಗೆ ಪ್ರಯತ್ನ: ಸಚಿವ ದಿನೇಶ್ ಗುಂಡೂರಾವ್

Update: 2024-02-10 18:35 IST

ಉಡುಪಿ, ಫೆ.10: ಉಡುಪಿ ಜಿಲ್ಲೆಗೆ ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆ ಕೇಂದ್ರ ಅತೀ ಅಗತ್ಯವಾಗಿ ಆಗಬೇಕಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮಂಜೂರು ಮಾಡುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಐ.ಗಡಾದ್ ಮಾತನಾಡಿ, ಜಿಲ್ಲೆಯ 33 ಆರೋಗ್ಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1843 ಎಂಡೋ ಸಲ್ಫಾನ್ ಬಾಧಿತರಿದ್ದು, ಅವರಿಗೆ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಯೋಜಕರ ನೇಮಕಾತಿ ಆಗಬೇಕು. ಬೈಂದೂರು ತಾಲೂಕಿನ ನಾಡ ಗ್ರಾಪಂ ವ್ಯಾಪ್ತಿಯ ಸೇನಾಪುರ ಗ್ರಾಮದ 5 ಎಕರೆ ಜಾಗದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಶಾಶ್ವತ ಪುನರ್‌ವಸತಿ ಕೇಂದ್ರ ಮಂಜೂರಾಗಿದ್ದು, ಇದಕ್ಕಾಗಿ 12ಕೋಟಿ ರೂ. ಪ್ರಾಜೆಕ್ಟ್ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ: ಜಿಲ್ಲೆಯ ಒಟ್ಟು 52 ಖಾಸಗಿ ಆಸ್ಪತ್ರೆಗಳ ಪೈಕಿ ಆಯುಷ್ಮಾನ್ ಯೋಜನೆಯಡಿ ಕೇವಲ 14 ಆಸ್ಪತ್ರೆಗಳು ನೋಂದಾಯಿತ ವಾಗಿದ್ದು, ಅದರಲ್ಲಿ ಪ್ರಮುಖ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮಣಿಪಾಲ ಕೆಎಂಸಿ ಆಸ್ಪತ್ರೆ ಮಾತ್ರ ಅರ್ಹತೆ ಪಡೆದಿದೆ. ಆದರೆ ಮಣಿಪಾಲ ಆಸ್ಪತ್ರೆಯಲ್ಲಿನ ಬೆಡ್‌ಗಳ ಕೊರತೆಯಿಂದ ನಮ್ಮ ಜಿಲ್ಲೆಯ ಆಯುಷ್ಮಾನ್ ರೋಗಿಗಳು ಅಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಈ ಸಂಬಂಧ ಮಣಿಪಾಲ ಆಸ್ಪತ್ರೆಯಲ್ಲಿ ಆಯುಷ್ಮಾನ್ ಬೆಡ್‌ಗಳ ಸಂಖ್ಯೆ ಜಾಸ್ತಿ ಮಾಡಬೇಕು. ಇಲ್ಲದಿದ್ದರೆ ನಮ್ಮ ರೋಗಿಗಳಿಗೆ ಬೇರೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಈ ಯೋಜನೆಯ ಪರಿಷ್ಕೃತ ಪ್ಯಾಕೇಜ್ ದರಗಳು ಆಸ್ಪತ್ರೆಯ ಅಂದಾಜು ಚಿಕಿತ್ಸಾ ವೆಚ್ಚಕ್ಕಿಂತ ತೀರಾ ಕಡಿಮೆ ಇರುವುದರಿಂದ ರೋಗಿಗಳನ್ನು ದಾಖಲಿಸಿ ಕೊಳ್ಳಲು ನಿರಾಕರಿಸಲಾಗುತ್ತದೆ ಎಂದು ಅಧಿಕಾರಿಗಳು ದೂರಿದರು.

ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರಗಿಸ ಬೇಕೆಂದು ಸಚಿವರು ಸೂಚಿಸಿದರು. ಆಯುಷ್ಮಾನ್ ಯೋಜನೆಯಲ್ಲಿ ಚಿಕಿತ್ಸೆ ಕುರಿತು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಉಡುಪಿಗೆ ಕಳುಹಿಸಿಕೊಡಲಾಗುವುದು. ಆ ಸಂಬಂಧ ಕೆಎಂಸಿ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲು ಸೂಚಿಸಲಾಗುವುದು ಎಂದರು.

ತಾಲೂಕು ಆಸ್ಪತ್ರೆಗಳ ಬೇಡಿಕೆ: ಉಡುಪಿ ಜಿಲ್ಲೆಯ ಹೊಸ ನಾಲ್ಕು ತಾಲೂಕುಗಳಿಗೆ ತಾಲೂಕು ಆಸ್ಪತ್ರೆಗಳ ಬೇಡಿಕೆ ಇದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಹುದ್ದೆ ಖಾಲಿ ಇದ್ದು, ಜಾಹೀರಾತು ಹಾಕಿದರೂ ಯಾರು ಕೂಡ ಬರುತ್ತಿಲ್ಲ. ಇದರಿಂದ ಸ್ಥಳೀಯವಾಗಿ ಬಹಳ ಸಮಸ್ಯೆಯಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಒಟ್ಟು ಏಳು ಹೆರಿಗೆ ತಜ್ಞರ ಹುದ್ದೆಯಲ್ಲಿ ಕೇವಲ ಮೂರು ಹುದ್ದೆ ಮಾತ್ರ ಭರ್ತಿಯಾಗಿದೆ. ಪುರುಷ ಆರೋಗ್ಯಕಾರ್ಯಕರ್ತರ ಕೊರತೆ ಕೂಡ ಸರಕಾರಿ ಆಸ್ಪತ್ರೆಗಳಲ್ಲಿ ಇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಫಾರ್ಮಸಿಸ್ಟ್, ಟೆಕ್ನಿಶಿಯನ್ಸ್, ಪಿಎಚ್‌ಸಿಓಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಜಿಪಂ ಸಿಇಓ ಪ್ರತೀಕ್ ಬಯಾಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್, ಆರೋಗ್ಯ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಬಿ.ಎಸ್., ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

5-6ವರ್ಷಗಳಿಂದ ನೇಮಕಾತಿಯೇ ಆಗಿಲ್ಲ: ಸಚಿವರು

ಮಲೇರಿಯಾ, ಡೆಂಗ್ಯುಯಂತಹ ಸಾಂಕ್ರಾಮಿಕ ರೋಗಗಳಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಆದುದರಿಂದ ಜಿಲ್ಲೆಗೆ ಅಗತ್ಯವಾಗಿ ಎಚ್‌ಐಓ ಸಿಬ್ಬಂದಿ ಗಳ ನೇಮಕ ಆಗಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 240 ಎಚ್‌ಐಓ ಹುದ್ದೆಗಳ ಪೈಕಿ 28 ಭರ್ತಿಯಾಗಿ 212 ಹುದ್ದೆಗಳು ಖಾಲಿಯಾಗಿವೆ ಎಂದು ವೈದ್ಯಾಧಿಕಾರಿ ಡಾ.ಪ್ರಶಾಂತ್ ಭಟ್ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಕಳೆದ ಐದು ಆರು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಯಾವುದೇ ನೇಮಕಾತಿ ಆಗಿಲ್ಲ. ಆದುದರಿಂದ ಈಗ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News