×
Ad

ಮಂಗನಕಾಯಿಲೆಗೆ ಮುಂದಿನ ವರ್ಷದೊಳಗೆ ಹೊಸ ವ್ಯಾಕ್ಸಿನ್ ಲಭ್ಯತೆ: ಆರೋಗ್ಯ ಸಚಿವರಿಂದ ಕೆಎಫ್‌ಡಿ ಬಾಧಿತ ಜಿಲ್ಲೆಗಳ ಪ್ರಗತಿ ಪರಿಶೀಲನೆ

Update: 2024-02-10 19:51 IST

ಉಡುಪಿ: ರಾಜ್ಯದ ಮೂರು ಜಿಲ್ಲೆಗಳಲ್ಲಿ ಮತ್ತೆ ಮಂಗನ ಕಾಯಿಲೆ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತಿದ್ದು, ಈ ಬಗ್ಗೆ ಜನತೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕಾಗಿದೆ. ಕಾಯಿಲೆಗೆ ಬಳಸುತಿದ್ದ ಹಿಂದಿನ ವ್ಯಾಕ್ಸಿನ್ ಬಳಕೆಯನ್ನು ನಿಲ್ಲಿಸಿದ್ದು, ಇದೀಗ ಹೈದರಾಬಾದ್ ಸಂಸ್ಥೆ ಹೊಸ ವ್ಯಾಕ್ಸಿನ್ ಸಂಶೋಧನೆಗೆ ಮುಂದಾಗಿದೆ. ಮುಂದಿನ ಮಳೆಗಾಲದ ವೇಳೆಗೆ ಹೊಸ ವ್ಯಾಕ್ಸಿನ್ ಲಭ್ಯವಾಗುವ ನಿರೀಕ್ಷೆ ಇದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕೆಎಫ್‌ಡಿ ಬಾಧಿತ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಳೆದ ನಾಲ್ಕು ತಿಂಗಳಿನಿಂದ ಅಧಿಕ ಪ್ರಮಾಣದಲ್ಲಿ ಮಂಗನಕಾಯಿಲೆ ಕಂಡುಬರುತ್ತಿರುವ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕ ಮಗಳೂರು ಅಲ್ಲದೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಗಳು ಭಾಗವಹಿಸಿದ್ದ ಸಭೆ ಯಲ್ಲಿ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ. ತ್ರಿವೇಣಿ ಮಂಗನಕಾಯಿಲೆ ಕುರಿತಂತೆ ವಿವರಗಳನ್ನು ನೀಡಿದರು.

ಕ್ಯಾಸನೂರು ಕಾಡಿನ ಕಾಯಿಲೆ (ಕೆಎಫ್‌ಡಿ- ಮಂಗನ ಕಾಯಿಲೆ) ಎಂದು ಕರೆಯುವ ಈ ಕಾಯಿಲೆ ವೈರಾಣು ಸೋಂಕಿತ ಉಣ್ಣಿ ಮರಿಗಳು ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದೆ.ಪಶ್ಚಿಮ ಘಟ್ಟದ ಕಾಡು ಪ್ರದೇಶಗಳಲ್ಲಿ ಇಂದು ಹೆಚ್ಚಾಗಿ ಕಂಡುಬರುತ್ತದೆ. ಕೊಡಗು, ಹಾಸನ, ಮೈಸೂರು, ಚಾಮರಾಜ ನಗರ, ಬೆಳಗಾವಿ, ಹಾವೇರಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಇದನ್ನು ಗುರುತಿಸಲಾಗಿದೆ ಎಂದರು.

ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಮೇ ತಿಂಗಳ ಅವಧಿಯಲ್ಲಿ ಕಂಡುಬರುವ ಈ ಕಾಯಿಲೆ, ಮಳೆಗಾಲದಲ್ಲಿ ಇರುವುದಿಲ್ಲ. ಹಠಾತ್ ಜ್ವರ, ತೀವ್ರವಾದ ಸ್ನಾಯುಗಳ ನೋವು, ತಲೆನೋವು ಇದರ ರೋಗ ಲಕ್ಷಣ. ಮೊದಲ ಹಂತದಲ್ಲಿ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಗುಣವಾಗುತ್ತದೆ ಎಂದರು.

70 ಪ್ರಕರಣ, 2 ಸಾವು: ಈ ವರ್ಷದ ಜನವರಿ 16ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಿಳಗಿಯಲ್ಲಿ ಮೊದಲ ಮಂಗನಕಾಯಿಲೆ ಪ್ರಕರಣ ಕಂಡುಬಂದಿತ್ತು. ಜನವರಿ ಮೊದಲ ವಾರದಿಂದ ನಿನ್ನೆಯವರೆಗೆ ಒಟ್ಟು 70 ಪ್ರಕರಣ ಗಳು ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 25, ಉತ್ತರ ಕನ್ನಡದಲ್ಲಿ 38 ಹಾಗೂ ಚಿಕ್ಕಮಗಳೂರು ಜಿಲ್ಲೆಯಿಂದ 7 ಪ್ರಕರಣಗಳು ವರದಿಯಾಗಿದೆ ಎಂದರು.

ರಾಜ್ಯದಲ್ಲಿ ಇದುವರೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಯಿಂದ ತಲಾ ಒಬ್ಬರು ಮೃತಪಟ್ಟಿದ್ದಾರೆ. ಸದ್ಯ 20 ಮಂದಿ ವಿವಿದೆಡೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ.ತ್ರಿವೇಣಿ ತಿಳಿಸಿದರು.

ಉತ್ತರ ಕನ್ನಡದ ಡಿಎಚ್‌ಓ ಡಾ.ನೀರಜ್ ಅವರು ತಮ್ಮ ಜಿಲ್ಲೆಯ ಕುರಿತು ಮಾಹಿತಿ ನೀಡಿ, ಸಿದ್ಧಾಪುರ ತಾಲೂಕಿನಲ್ಲಿ ಮೊದಲ ಬಾರಿಗೆ ಮಂಗಗಳ ಸಾವನ್ನು ಗುರುತಿಸಲಾಗಿದ್ದು, ಇಲ್ಲೇ ಮೊದಲ ಪಾಸಿಟಿವ್ ಪ್ರಕರಣವೂ ಕಂಡುಬಂದಿತ್ತು. ಜಿಲ್ಲೆಯಲ್ಲಿ 291 ಮಂದಿಗೆ ಪರೀಕ್ಷೆ ನಡೆಸಿದ್ದು, ಇವರಲ್ಲಿ 38 ಮಂದಿಯಲ್ಲಿ ಮಂಗನಕಾಯಿಲೆ ಕಂಡುಬಂದಿತ್ತು ಎಂದರು.

ಸದ್ಯ ಜಿಲ್ಲೆಯ ಸಿದ್ಧಾಪುರದಲ್ಲಿ ಮೂವರು ಹಾಗೂ ಮಣಿಪಾಲದ ಕೆಎಂಸಿಯಲ್ಲಿ ಐವರು ಚಿಕಿತ್ಸೆಯಲ್ಲಿದ್ದು, ಕೆಎಂಸಿಯಲ್ಲಿ ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದರೆ ಮೂವರ ಸ್ಥಿತಿ ಸ್ಥಿರವಾಗಿದೆ. ಐಸಿಯುನಲ್ಲಿ ಇರುವ ಒಬ್ಬರ ಸ್ಥಿತಿ ಗಂಭೀರ ವಾಗಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ ಎಂದರು.

ಶಿವಮೊಗ್ಗದ ಡಿಎಚ್‌ಓ ಡಾ.ರಾಜೇಶ್ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 2409 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 25 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೊಸನಗರದಲ್ಲಿ ಒಬ್ಬರು ಕೃಷಿ ಕೂಲಿ ಕಾರ್ಮಿಕ ಮೃತ ಪಟ್ಟಿದ್ದಾರೆ ಎಂದರು. ಜಿಲ್ಲೆಯಲ್ಲಿ ತೀರ್ಥಹಳ್ಳಿ (9), ಹೊಸನಗರ (6) ಹಾಗೂ ಸಾಗರ ತಾಲೂಕಿನಿಂದ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದರು.

ಚಿಕ್ಕಮಗಳೂರು ಡಿಎಚ್‌ಓ ಮಾತನಾಡಿ, ಜಿಲ್ಲೆಯಲ್ಲಿ 38 ಮಂದಿಯನ್ನು ಶಂಕಿತ ಮಂಗನಕಾಯಿಲೆಗೆ ಪರೀಕ್ಷೆಗೊಳಪಡಿ ಸಿದ್ದು, 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದರು. ಶೃಂಗೇರಿ ತಾಲೂಕು ಬೇಗಾನೆಯ 79 ವರ್ಷ ಹಿರಿಯರೊಬ್ಬರು ಮಣಿಪಾಲದಲ್ಲಿ ಚಿಕಿತ್ಸೆಗೆ ದಾಖಲಾದಾಗ ಸೋಂಕು ಪತ್ತೆಯಾಗಿದ್ದು ಬಹುಅಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದರು.

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಂಗನಕಾಯಿಲೆ ಚಿಕಿತ್ಸೆ ಬಳಸುತಿದ್ದ ವ್ಯಾಕ್ಸಿನ್ ಉಪಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಹೊಸ ವ್ಯಾಕ್ಸಿನ್ ಸಂಶೋಧನೆಗೆ ಐಸಿಎಂಆರ್‌ಗೆ ಸೂಚಿಸಿದ್ದು, ಅವರು ಇತ್ತೀಚೆಗೆ ಒಪ್ಪಿಗೆ ನೀಡಿದ್ದಾರೆ. ಹೈದರಾಬಾದ್‌ನ ಎನ್‌ಐವಿ ಕೇಂದ್ರದಲ್ಲಿ ಹೊಸ ವ್ಯಾಕ್ಸಿನ್ ಸಂಶೋಧನೆ ನಡೆದಿದ್ದು, ಅವರಿಗೆ ಎಲ್ಲಾ ಮಾಹಿತಿ, ನೆರವು ನೀಡುವಂತೆ ಸೂಚಿಸಲಾಗಿದೆ. ಮುಂದಿನ ವರ್ಷದ ವೇಳೆಗೆ ಹೊಸ ವ್ಯಾಕ್ಸಿನ್ ಬಳಕೆಗೆ ಲಭ್ಯವಾಗ ಬಹುದು ಎಂದರು.

ಸೋಂಕು ಪತ್ತೆಯಾಗಿರುವ ಎಲ್ಲಾ ಜಿಲ್ಲೆಗಳಲ್ಲೂ ಇಲಾಖೆ ಅಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕು. ಈಗಾಗಲೇ ಇಬ್ಬರು ಕಾಯಿಲೆಗೆ ಬಲಿಯಾಗಿದ್ದು, ಇನ್ನು ಯಾರೂ ಸಹ ಬಲಿಯಾಗದಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳ ಸಹಯೋಗದೊಂದಿಗೆ, ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ ಬಾಧಿತ ಪ್ರದೇಶಗಳಲ್ಲಿ ಜನರಿಗೆ ಅರಿವು ಮೂಡಿಸಿ, ಮಾಹಿತಿ ಒದಗಿಸಬೇಕು. ತಪ್ಪು ಮಾಹಿತಿ ಹೋಗದಂತೆ ಜಾಗೃತೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್, ಆರೋಗ್ಯ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಬಿ. ಎಸ್, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್, ವಿವಿಧ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News