×
Ad

ರಾಜ್ಯಮಟ್ಟದ ವಕೀಲರ ಸಾಂಸ್ಕೃತಿಕ ಸ್ಪರ್ಧೆ : ಶಿವಮೊಗ್ಗ ವಕೀಲರ ಸಂಘ ತಂಡಕ್ಕೆ ಸಮಗ್ರ ಪ್ರಶಸ್ತಿ

Update: 2024-02-12 20:33 IST

ಉಡುಪಿ, ಫೆ.12: ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬ ‘ಕಲಾ ಸಂಭ್ರಮ’ದಲ್ಲಿ ಶಿವಮೊಗ್ಗ ವಕೀಲರ ಸಂಘದ ತಂಡವು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ದ್ವಿತೀಯ ಬಹುಮಾನವನ್ನು ಹಾಸನ ವಕೀಲರ ಸಂಘ, ತೃತೀಯ ಬಹುಮಾನ ವನ್ನು ಬೆಂಗಳೂರಿನ ಆನೆಕಲ್ ವಕೀಲರ ಸಂಘ ಪಡೆಯಿತು. ಈ ತಂಡಗಳು ಕ್ರಮವಾಗಿ 33,333ರೂ., 22,222ರೂ., 11,111ರೂ. ಮತ್ತು ಶಾಶ್ವತ ಫಲಕ ವನ್ನು ಪಡೆದುಕೊಂಡಿತು.

ಅತ್ಯುತ್ತಮ ಕಾರ್ಯಕ್ರಮ ನಿರೂಪಣೆ- ಕುಂದಾಪುರ ವಕೀಲರ ಸಂಘ, ಅತ್ಯುತ್ತಮ ಸಮೂಹ ನೃತ್ಯ- ಶಿವಮೊಗ್ಗ ಸಂಘ, ಅತ್ಯುತ್ತಮ ಸಮೂಹ ಗಾಯನ- ಹಾಸನ ಸಂಘ, ಅತ್ಯುತ್ತಮ ವಿಶೇಶ ಪ್ರತಿಭೆ- ಶಿಕಾರಿಪುರ ಸಂಘ, ಅತ್ಯುತ್ತಮ ಶಿಸ್ತುಬದ್ಧ ತಂಡ ಪ್ರದರ್ಶನ- ಮಂಗಳೂರು ಸಂಘ, ಅತ್ಯುತ್ತಮ ಸೃಜನಶೀಲ ಪ್ರದರ್ಶನ- ಮಂಗಳೂರು ಸಂಘ, ತೀರ್ಪುಗಾರರ ಮೆಚ್ಚುಗೆ ಪಡೆದ ತಂಡಗಳು- ಬೆಂಗಳೂರು, ಮಂಗಳೂರು, ಕಾರ್ಕಳ ಸಂಘ, ವಿಶೇಷ ಮನ್ನಣೆಗೆ ಪಾತ್ರರಾದ ವೈಯಕ್ತಿಕ ಪ್ರತಿಭೆಗಳು- ಚಿತ್ರದುರ್ಗ, ಮಂಗಳೂರು, ಬೆಂಗಳೂರು ವಕೀಲರ ಸಂಘ.

ಬಹುಮಾನ ವಿತರಣೆ: ರವಿವಾರ ಜರಗಿದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸ ಲಾಯಿತು. ರಾಜ್ಯ ಉಚ್ಛ ನ್ಯಾಯಾ ಲಯ ನ್ಯಾಯಮೂರ್ತಿ ಡಾ.ಎಚ್.ಬಿ.ಪ್ರಭಾಕರ್ ಶಾಸ್ತ್ರಿ ಸಮಾರೋಪ ಭಾಷಣ ಮಾಡಿ, ಸಾಹಿತ್ಯ, ಸಂಗೀತದ ಒಲವು ಮೂಡಿಸಿಕೊಂಡಲ್ಲಿ ಜೀವನೋತ್ಸಾಹ ಇರುತ್ತದೆ. ಸದಾ ಭಿರುಚಿ ಇಲ್ಲದ ವ್ಯಕ್ತಿ ಲವಲವಿಕೆಯಿಂದ ಇರಲಾರ. ಜೀವ ದಲ್ಲಿ ಕಲೆಯನ್ನು ಆರಾಧಿಸುವ, ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿದರು. ಅಧ್ಯಕ್ಷತೆಯನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಷಾ ಶಾಸ್ತ್ರಿ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಉಪಸ್ಥಿತರಿದ್ದರು.

ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ನಿತೀಶ್ ಶೆಟ್ಟಿ ಎಕ್ಕಾರು ಹಾಗೂ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News