×
Ad

ಮೀನುಗಾರಿಕೆ ದೋಣಿಗಳಿಗೆ ಎಲೆಕ್ಟ್ರಿಕ್ ಇಂಜಿನ್ ಬಳಕೆ ಭವಿಷ್ಯದ ಅನಿವಾರ್ಯ: ಯಶ್‌ಪಾಲ್ ಸುವರ್ಣ

Update: 2024-02-15 17:38 IST

ಉಡುಪಿ: ಪರಿಸರ ಮಾಲಿನ್ಯ ನಿಯಂತ್ರಣ ಹಿನ್ನೆಲೆಯಲ್ಲಿ ಸೀಮೆಎಣ್ಣೆ ಹಾಗೂ ಡೀಸೆಲ್ ಬಳಕೆ ನಿಷೇಧಕ್ಕೆ ಕೇಂದ್ರ ಸರಕಾರ ಮುಂದಾದಲ್ಲಿ ಭವಿಷ್ಯದ ಮೀನುಗಾರಿಕೆಗೆ ದೋಣಿಗಳಿಗೆ ಎಲೆಕ್ಟ್ರಿಕ್ ಇಂಜಿನ್ ಅಳವಡಿಕೆ ಅನಿವಾರ್ಯ ವಾಗಲಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಕರಾವಳಿ ಜಿಲ್ಲೆಯ ಮೀನುಗಾರರಿಗೆ ಉಡುಪಿಯಲ್ಲಿ ಆಯೋಜಿಸಲಾದ ಭವಿಷ್ಯದ ಮೀನುಗಾರಿಕೆಗೆ ಎಲೆಕ್ಟ್ರಿಕ್ ಇಂಜಿನ್ ಬಳಕೆಯ ಅನಿವಾರ್ಯತೆ ಹಾಗೂ ಸವಾಲುಗಳ ಕುರಿತ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಮೀನುಗಾರಿಕಾ ದೋಣಿ ಹಾಗೂ ಬೋಟ್‌ಗಳು ಇಂಧನವಾಗಿ ಸೀಮೆಎಣ್ಣೆ ಹಾಗೂ ಡೀಸೆಲ್ ಉತ್ಪನ್ನಗಳನ್ನು ಅವಲಂಬಿಸಿದ್ದು, ಸರಕಾರ ಹಂತ ಹಂತವಾಗಿ ಈ ಇಂಧನಗಳನ್ನು ನಿಷೇಧಿಸಿ ಪರ್ಯಾಯವಾಗಿ ಎಲೆಕ್ಟ್ರಿಕ್ ಇಂಜಿನ್ ಅಳವಡಿಕೆಗೆ ಲಭ್ಯವಿರುವ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸರಕಾರದ ಮೂಲಕ ಆರ್ಥಿಕ ಸಹಕಾರ ನೀಡಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಖಾಸಗಿ ಕಂಪನಿಯ ಪ್ರತಿನಿಧಿಗಳು ಮೀನುಗಾರಿಕೆಗೆ ಲಭ್ಯವಿರುವ ಎಲೆಕ್ಟ್ರಿಕ್ ಇಂಜಿನ್ ತಂತ್ರಜ್ಞಾನ, ಅನುಕೂಲತೆ ಹಾಗೂ ಲಭ್ಯತೆಗಳ ಬಗ್ಗೆ ಮೀನುಗಾರ ಮುಖಂಡರಿಗೆ ಮಾಹಿತಿ ನೀಡಿ, ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕಲ್ಲೇರ್ ಹಾಗೂ ಕರಾವಳಿ ಜಿಲ್ಲೆಯ ವಿವಿಧ ಮೀನುಗಾರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News