×
Ad

ರೈತರ ಪ್ರತಿಭಟನೆ ಅಂತಾರಾಷ್ಟ್ರೀಯ ಪಿತೂರಿ: ಶೋಭಾ ಕರಂದ್ಲಾಜೆ

Update: 2024-02-15 21:40 IST

ಉಡುಪಿ: ಕೇಂದ್ರ ಸರಕಾರದ ವಿರುದ್ಧ ರೈತರ ತೀವ್ರ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಚುನಾವಣೆ ಹತ್ತಿರ ಬರುವಾಗ ರೈತರು ಡೆಲ್ಲಿಗೆ ಬಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತಿರುವುದು ಅಂತಾರಾಷ್ಟ್ರೀಯ ಪಿತೂರಿಯಾಗಿದೆ. ಈಗಾಗಲೇ ಮೂರು ಸುತ್ತಿನ ಚರ್ಚೆ ಯಾಗಿದೆ. ಈ ಸಂಬಂಧ ರೈತರ ಜೊತೆ ಮತ್ತೆ ಚರ್ಚೆಗೆ ಈಗಲೂ ನಾವು ಸಿದ್ದವಿದ್ದೇವೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕುರಿತು 2006ರಲ್ಲಿ ವರದಿ ಸಿದ್ಧಪಡಿಸಲಾಗಿತ್ತು. ಆಗ ಅಧಿಕಾರದಲ್ಲಿದ್ದ ಯುಪಿಎ ಸರಕಾರ, ಶೀತಲೀಕರಣ ಘಟಕ ಮಾಡುವ ಬದಲು ಶಿಫಾರಸ್ಸುಗಳನ್ನು ಶೀತಲೀ ಕರಣ ಘಟಕದಲ್ಲಿ ಇರಿಸಿತ್ತು. ಮೋದಿ ಪ್ರಧಾನಿಯಾದ ಕೂಡಲೇ ಸ್ವಾಮಿನಾಥನ್ ಭೇಟಿಯಾಗಿ ಸ್ವಾಮಿನಾಥನ್ ಕಮಿಟಿ ಮಾಡಿರುವ ಎಲ್ಲ 207 ಶಿಫಾರಸುಗಳನ್ನು ಈಡೇರಿಸಿದ್ದಾರೆ ಎಂದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಚುನಾ ವಣೆ ಸ್ಪರ್ಧಿಸುವ ಕುರಿತು ಉತ್ತರಿಸಿದ ಅವರು, ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ನನ್ನ ಹೆಸರು ಬರುತ್ತಿದೆ. ಐದಾರು ಕ್ಷೇತ್ರದ ಹೆಸರು ಕೇಳಿ ಬರುತ್ತಿದೆ. ಉಡುಪಿ ಚಿಕ್ಕಮಗಳೂರು ನನ್ನ ಕ್ಷೇತ್ರ. ಇಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನನ್ನ ಬಗ್ಗೆ ಗೊತ್ತೇ ಇಲ್ಲದಾಗ ಉಡುಪಿ ಚಿಕ್ಕಮಗಳೂರು ಜನ ನನ್ನನ್ನು ಗೆಲ್ಲಿಸಿದ್ದಾರೆ. ಹಾಗಾಗಿ ನಾನು ಬೇರೆ ಕಡೆ ಹೋಗುವ ಪ್ರಶ್ನೆ ಬರುವುದಿಲ್ಲ. ಪಕ್ಷದ ನಿರ್ಧಾರ ಮತ್ತು ಸೂಚನೆಗೆ ನಾನು ಬದ್ಧಳಾಗಿದ್ದೇನೆ. ಈ ಬಾರಿ ಅಭಿವೃದ್ಧಿ ಆಧಾರದಲ್ಲಿ ನಾನು ಮತ ಕೇಳುತ್ತೇವೆ ಎಂದು ತಿಳಿಸಿದರು.

ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಕಾಂಗ್ರೆಸ್‌ಗೆ ಹೋಗ್ತಾರೆ, ಯಾರು ಬಿಜೆಪಿಯಲ್ಲಿ ಇರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಿಂದ ಲಾಭ ಪಡೆದು ಪಕ್ಷ ತ್ಯಜಿಸಿದರೆ ಅವರಿಗೆ ನಷ್ಟ. ಅಧಿಕಾರದಲ್ಲಿದ್ದಾಗ ಬರುತ್ತೇವೆ, ಇಲ್ಲದಾಗ ಹೋಗುತ್ತೇವೆ ಎಂಬುದು ಬಿಜೆಪಿಯ ಮಾನಸಿಕತೆ ಅಲ್ಲ. ಯಾರೂ ಪಕ್ಷವನ್ನು ಬಿಡಬೇಡಿ ಎಂದು ವಿನಂತಿಸುತ್ತೇನೆ. ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ, ವಿಶ್ವನಾಯಕ ಮಾಡುವ ಅವಕಾಶ ಸಿಗಲಿದೆ ಎಂದರು.

ಸಿದ್ದರಾಮಯ್ಯ 15ನೇ ದಾಖಲೆಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನ ಬಳಿ ಹಣ ಇಲ್ಲ. ಬೊಕ್ಕಸದ ಹಣವನ್ನು ಗ್ಯಾರಂಟಿಗೆ ಖರ್ಚು ಮಾಡಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿಗಳು ಕೂಡ ನಡೆಯುತ್ತಿಲ್ಲ. ಉಚಿತ ಬಸ್ ಎಂದು ಹೇಳಿ ಶೇ.೮೦ರಷ್ಟು ಬಸ್ ನಿಲ್ಲಿಸಿದ್ದಾರೆ. ಬಸ್ಸಿಗೆ ಡೀಸೆಲ್ ಹಾಕಲು ಹಣ ಇಲ್ಲ. ಸಂಬಳ ಕೊಡಲು ಹಣ ಇಲ್ಲ. ನ್ಯಾಯಾಧೀಶರಿಗೆ ಎರಡು ತಿಂಗಳು ತಡವಾಗಿ ಸಂಬಳ ಕೊಟ್ಟಿದ್ದಾರೆ. ಚುನಾವಣೆಯ ಉದ್ದೇಶವಾಗಿಟ್ಟುಕೊಂಡು ಘೋಷಿಸುವ ಸುಳ್ಳು ಬಜೆಟ್ ಘೋಷಣೆಯಾಗಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News