ಸಂವಿಧಾನದಿಂದ ದೇಶದ ಪ್ರತಿ ಪ್ರಜೆಗೂ ಘನತೆ, ಗೌರವದ ಬದುಕು: ಉಡುಪಿ ಡಿಸಿ ವಿದ್ಯಾಕುಮಾರಿ
ಕಾಪು: ಭಾರತದ ಸಂವಿಧಾನವು ಇಡೀ ಜಗತ್ತಿನ ಅತ್ಯುತ್ತಮ ಸಂವಿಧಾನವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಘನತೆ ಮತ್ತು ಗೌರವದಿಂದ ಜೀವಿಸುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ. ಈ ಕುರಿತು ಸಾರ್ವಜನಿಕರು ಅರಿವು ಹೊಂದುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಕಾಪು ಸಮುದ್ರ ತೀರದ ಲೈಟ್‌ಹೌಸ್ ಬಳಿ ಇಂದು ನಡೆದ ಸಂವಿಧಾನ ಜಾಗ್ರತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಡೀ ವಿಶ್ವದ ವೈವಿಧ್ಯಮಯ ಸನ್ನಿವೇಶಗಳನ್ನು ಅಭ್ಯಸಿಸಿ, ಭಾರತಕ್ಕೆ ಅಗತ್ಯ ವಿರುವ ಸಂವಿಧಾನವನ್ನು ರಚಿಸಲಾಗಿದ್ದು, ದೇಶದ ಪ್ರತೀ ಪ್ರಜೆಗೂ ಸಮಾನ ಅವಕಾಶ, ವ್ಯಕ್ತಿ ಗೌರವ, ಸಹೋದರತ್ವ ಭಾವನೆ ಮೂಡಿಸುವ ಅಂಶಗಳನ್ನು ಸಂವಿ ಧಾನ ಹೊಂದಿದೆ. ಈ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರಕಾರ ಆಯೋಜಿಸಿರುವ ಸಂವಿಧಾನ ಜಾಗ್ರತಿ ಜಾಥಾ ಕಾರ್ಯಕ್ರಮ ಜಿಲ್ಲೆಯಾದ್ಯಂತ ಸಂಚರಿಸಿ ಜಾಗ್ರತಿ ಮೂಡಿಸುತ್ತಿದೆ. ಫೆ.25ರಂದು ಬೆಂಗಳೂರಿನಲ್ಲಿ ಈ ಬಗ್ಗೆ ಬೃಹತ್ ಸಮಾವೇಶ ನಡೆಯಲಿದೆ ಎಂದವರು ವಿವರಿಸಿದರು.
ಜಿಲ್ಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಇಂದು ಉಡುಪಿಯಲ್ಲಿ ಸಂವಿಧಾನ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಪೊಲೀಸ್, ಕಂದಾಯ, ಆರೋಗ್ಯ, ಅರಣ್ಯ ಸೇರಿದಂತೆ 8 ತಂಡಗಳು ಇದರಲ್ಲಿ ಭಾಗವಹಿಸಿವೆ. ಅಜ್ಜರಕಾಡು ಕ್ರೀಡಾಂಗಣದಿಂದ ಬೀಡನಗುಡ್ಡೆ ವರೆಗೆ 400ಕ್ಕೂ ಅಧಿಕ ನೌಕರರಿಂದ ಬೈಕ್ ರ್ಯಾಲಿ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ.ಗಣನಾಥ ಎಕ್ಕಾರ್ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಅಳವಡಿಸಿರುವ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ತತ್ವಗಳನ್ನು ಎಲ್ಲರು ಅರಿಯಬೇಕು. ಸಂವಿಧಾನದ ಪೀಠಿಕೆಯಲ್ಲಿರುವ ಅಂಶಗಳನ್ನು ಅರ್ಥಮಾಡಿಕೊಂಡರೆ ದೇಶದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯ ಲಿದೆ. ಎಲ್ಲಾ ಭಾರತೀಯರಿಗೂ ಸಂವಿಧಾನವೇ ಪವಿತ್ರಗ್ರಂಥವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಲಾಲಾಜಿ ಮೆಂಡನ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರ್, ದಸಂಸ ಮುಖಂಡ ಸುಂದರ ಮಾಸ್ತರ್, ಕಾಪು ತಾಪಂ ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿ ಸಿಲ್ವಾ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು ತಹಶೀಲ್ದಾರ್ ಪ್ರತಿಭಾ ಸ್ವಾಗತಿಸಿದರು. ಮುಖ್ಯಾಧಿಕಾರಿ ಸಂತೋಷ್ ವಂದಿಸಿ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.