ಐದು ಗ್ಯಾರಂಟಿಗಳ ಜಾರಿಗೆ ಒತ್ತು ನೀಡಿದ ಬಜೆಟ್‌ಗೆ ಸಿಪಿಎಂ ಸ್ವಾಗತ
ಉಡುಪಿ: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಅವರ 15ನೇ ಹಾಗೂ 2024-25ರ ಸಾಲಿಗೆ 1.05 ಲಕ್ಷ ಕೋಟಿ ಸಾಲದ ಹೊರೆಯನ್ನ ಹೊತ್ತ 3.71 ಲಕ್ಷ ಕೋಟಿರೂ. ಗಳ ಬಜೆಟ್‌ನಲ್ಲಿ 5 ಗ್ಯಾರಂಟಿಗಳ ಜಾರಿಗೆ ಒತ್ತು ನೀಡಿದ ಕ್ರಮವನ್ನು ಸಿಪಿಐ(ಎಂ) ಸ್ವಾಗತಿಸಿದೆ.
ಆದರೆ ಅಸಂಘಟಿತ ಕಾರ್ಮಿಕರಾದ ಆಟೊ, ಬಸ್, ಲಾರಿ ಚಾಲಕರು ಮತ್ತು ಇತರ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಮೂಲಕ ಸವಲತ್ತುಗಳನ್ನು ಒದಗಿಸಲು ಹೆಚ್ಚಿನ ಪ್ರಮಾಣದ ಕ್ರಮ ಕೈಗೊಂಡಿಲ್ಲ. ಅಂಗನವಾಡಿ, ಆಶಾ, ಬಿಸಿಯೂಟ, ಹಾಸ್ಟೆಲ್, ಸಂಜೀವಿನಿ ನೌಕರರಿಗೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುವವರಿಗೆ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ವೇತನ ಹೆಚ್ಚಳ ಮಾಡಬೇಕಾಗಿತ್ತು ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ.
ಬರಗಾಲದಲ್ಲಿ ಬೇಯುತ್ತಿರುವ ಕೃಷಿಕರಿಗೆ, ಕೇಂದ್ರ ಒಕ್ಕೂಟ ಸರಕಾರದ ಅಸಹಕಾರ ಮತ್ತು ತಾರತಮ್ಯ ನೀತಿಯ ನಡು ವೆಯೂ ತಲಾ 2 ಸಾವಿರ ರೂಗಳ ಪರಿಹಾರ, ಸಾಲದ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ, ಸಹಕಾರ ರಂಗದಲ್ಲಿ ಹೆಚ್ಚುವರಿ ಸಾಲ ನೀಡಲು, ಎಪಿಎಂಸಿಗಳನ್ನು ಪುನರುಜ್ಜೀವನ ಗೊಳಿಸಲು ಕ್ರಮ, ಹಾಲು ಹಾಗೂ ರೇಷ್ಮೆ ಉತ್ಪಾದಕರಿಗೆ ಸಹಾಯಧನದ ಹೆಚ್ಚಳ, ದೇವದಾಸಿ ಮಹಿಳೆಯರು, ಮಂಗಳಮುಖಿಯರ ಮಾಸಿಕ ಸಹಾಯಧನ ಹೆಚ್ಚಳ, ಅಂಗನವಾಡಿ ನೌಕರರಿಗೆ ಗ್ರಾಚ್ಯೂಯಿಟಿ ಮತ್ತು ಸ್ಮಾರ್ಟ್‌ಪೋನ್ ಮುಂತಾದ ಘೋಷಣೆಗಳನ್ನು ಪಕ್ಷ ಹೇಳಿಕೆಯಲ್ಲಿ ಸ್ವಾಗತಿಸಿದೆ.
ಕೇಂದ್ರದ ಒಕ್ಕೂಟ ಸರಕಾರ ಹಾಗೂ ರಾಜ್ಯ ಸರಕಾರಗಳು ಎರಡೂ ಸೇರಿ ಮುಂದಿನ ದಿನಗಳಲ್ಲಿ ಬಡರೈತರ ಸಾಲ ಮನ್ನಾಕ್ಕೆ ಸಂಬಂಧಿಸಿ ಕ್ರಮ ವಹಿಸಬೇಕಿದೆ. ಕೃಷಿ ಉತ್ಪನ್ನಗಳ ಬೆಲೆಗಳ ಏರಿಳಿತ ಮಾಡುವ ಮಾರುಕಟ್ಟೆ ಶಕ್ತಿಗಳಿಂದ ಹಾಗೂ ಬರ ಹಾಗೂ ಅತಿವೃಷ್ಟಿ, ಕಳಪೆ ಬೀಜ, ಕ್ರಿಮಿನಾಶಕ ಗಳಿಂದಾಗುವ ನಷ್ಟದಿಂದ ರೈತರನ್ನು ರಕ್ಷಿಸಲು ಕೇರಳ ಮಾದರಿಯ ಋಣಮುಕ್ತ ಕಾಯ್ದೆಗೆ ಕ್ರಮವಹಿಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ.
ಒಕ್ಕೂಟ ಸರಕಾರದ ವಿದ್ಯುತ್ ತಿದ್ದುಪಡಿ ಮಸೂದೆಯು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದ್ದು ಅದನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಬಜೆಟ್‌ನಲ್ಲಿ ಪ್ರಕಟಿಸಬೇಕೆಂದು ರಾಜ್ಯದ ಜನತೆ ಒತ್ತಾಯಿಸುತ್ತಿದ್ದರೂ ಸಿದ್ಧರಾಮಯ್ಯ ಸರಕಾರ ಅದನ್ನು ಜಾರಿಗೊಳಿಸಿಲ್ಲ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.