×
Ad

ಸೇನಾಪುರದಲ್ಲಿ ಎಲ್ಲಾ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಒತ್ತಾಯ

Update: 2024-02-18 20:49 IST

ಕುಂದಾಪುರ: ತಾಲೂಕಿನ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡುವುದರಿಂದ 15 ಗ್ರಾಪಂ ವ್ಯಾಪ್ತಿಯ 24 ಗ್ರಾಮದ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಈ ಹಿಂದೆ ಮನವಿ ನೀಡಿ 4 ತಿಂಗಳಾದರೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಅದಕ್ಕಾಗಿ ಎರಡನೇ ಹಂತದಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಮುಂದಿನ ದಿನದಲ್ಲಿ ಹೋರಾಟ ಉಗ್ರರೂಪ ಪಡೆಯಲಿದೆ ಎಂದು ಸೇನಾಪುರ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ಸಂಚಾಲಕ ರಾಜೀವ ಪಡುಕೋಣೆ ಎಚ್ಚರಿಸಿದ್ದಾರೆ.

ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ‘ಸೇನಾಪುರ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ’ ವತಿಯಿಂದ ರೈಲು ನಿಲ್ದಾಣದ ಎದುರು ವಿವಿಧ ಸಂಘಟನೆಗಳು, ಸಮಾನ ಮನಸ್ಕರ ಜೊತೆಗೂಡಿ ರವಿವಾರ ನಡೆಸಿದ ‘ಎರಡನೇ ಹಂತದ ಸೇನಾಪುರ ಚಲೋ, ಬೃಹತ್ ಪ್ರತಿಭಟನೆ ಹಕ್ಕೊತ್ತಾಯ’ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಹೋರಾಟ ಸಮಿತಿಯ ಕೆನಡಿ ಫಿರೇರಾ ಮಾತನಾಡಿ, ಈ ರೈಲು ನಿಲ್ದಾಣ ದಲ್ಲಿ ಮೂರು ರೈಲ್ವೇ ಟ್ರಾಕ್‌ಗಳಿದ್ದು ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಪೂರಕ ವ್ಯವಸ್ಥೆಗಳಿವೆ. ಈ ಭಾಗದಲ್ಲಿ ಪ್ರವಾಸೋಧ್ಯಮ, ಧಾರ್ಮಿಕ ಕೇಂದ್ರಗಳು ಹೆಚ್ಚಿದ್ದು ಎಕ್ಸ್‌ಪ್ರೆಸ್ ರೈಲು ನಿಲುಗಡೆಯಿಂದ ಬಹಳಷ್ಟು ಅನುಕೂಲ. ಅಲ್ಲದೆ ಸುಮಾರು 24 ಗ್ರಾಮಗಳ ಸಾವಿರಾರು ಜನರು ಉದ್ಯೋಗ ಮತ್ತು ಶಿಕ್ಷಣ ನಿಮಿತ್ತ ಕಾರವಾರ, ಗೋವಾ, ರತ್ನಗಿರಿ, ಮುಂಬೈ, ಹಾಸನ, ಮೈಸೂರು, ಬೆಂಗಳೂರು ಹಾಗೂ ಕೇರಳ ರಾಜ್ಯದ ನಗರಗಳಲ್ಲಿ ವಾಸವಿದ್ದು ನಿತ್ಯ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಆದಾಯದ ನೆಪವೊಡ್ಡಿ ಇಲ್ಲಿ ರೈಲುಗಳ ನಿಲುಗಡೆ ಮಾಡದಿರುವುದು ಸರಿಯಲ್ಲ ಎಂದರು.

ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಹೆಂಚು ಕಾರ್ಮಿಕರ ಸಂಘಟನೆಯ ಎಚ್. ನರಸಿಂಹ ಮೊದಲಾದವರು ಮಾತನಾಡಿದರು. ಸೇನಾಪುರ ನಿಲ್ದಾಣದಲ್ಲಿ ಪ್ರಮುಖವಾಗಿ ನಿಲ್ಲಬೇಕಾದ 10 ರೈಲುಗಳ ವಿವರ ಹಾಗೂ ಮುಖ್ಯ ಬೇಡಿಕೆ ಯೊಳಗೊಂಡ ಮನವಿಯನ್ನು ರೈಲ್ವೇ ಇಲಾಖಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ನಾಡ ಗ್ರಾಪಂ ಸದಸ್ಯೆ ಶೋಭಾ ಕೆರೆಮನೆ, ರೈಲು ಹೋರಾಟ ಸಮಿತಿಯ ರಾಮ ಪೂಜಾರಿ ಮುಲ್ಲಿಮನೆ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡರಾದ ಶೀಲಾವತಿ, ಕರ್ನಾಟಕ ಪ್ರಾಂತ ಕೃಷಿಕೂಲಿಗಾರರ ಸಂಘದ ನಾಗರತ್ನಾ ನಾಡ, ಡಿವೈಎಫ್‌ಐ ಪಡುಕೋಣೆ ಘಟಕದ ಕಾರ್ಯದರ್ಶಿ ರಾಜೇಶ್ ಪಡುಕೋಣೆ, ವಿವಿಧ ಸಂಘಟನೆಯ ಮುಖಂಡರಾದ ಸಂತೋಷ್ ಹೆಮ್ಮಾಡಿ, ಅರುಣ್ ಗಂಗೊಳ್ಳಿ, ಚಿಕ್ಕ ಮೊಗವೀರ, ಲಾಯೆನ್ಸ್ ರೆಬೆಲ್ಲೋ, ಶ್ರೀನಿವಾಸ ಪೂಜಾರಿ ಗುಜ್ಜಾಡಿ ಮೊದಲಾದವರಿದ್ದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ನಿರೂಪಿಸಿ, ಡಿವೈಎಫ್‌ಐ ಸಂಘಟನೆಯ ನಾಗರಾಜ ಕುರು ಸ್ವಾಗತಿಸಿದರು.

"ದೇಶದ ವಿವಿಧ ರೈಲ್ವೆ ನಿಲ್ದಾಣಗಲಲ್ಲಿ ರೈಲು ನಿಲುಗಡೆಗೆ ಒತ್ತಾಯಿಸಿ ಜನರು ಪ್ರತಿಭಟನೆ ನಡೆಸಿದಾಗ ರೈಲ್ವೆ ಇಲಾಖೆ ಷರತ್ತು ವಿಧಿಸಿ ನಿಲುಗಡೆ ಮಾಡುತ್ತದೆ. ಅಂತೆಯೇ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಸಂಬಂಧಿಸಿ ರೈಲ್ವೇ ಇಲಾಖೆ ಮೂರು ತಿಂಗಳ ತಾತ್ಕಾಲಿಕ ಅವಧಿಗೆ ಯಾವುದೇ ಷರತ್ತುಗಳನ್ನು ವಿಧಿಸಿದರೂ ಅದನ್ನು ಪೂರ್ತಿಗೊಳಿಸಲು ನಾವು ಬದ್ಧರಾಗಿದ್ದೇವೆ".

-ರಾಜೀವ ಪಡುಕೋಣೆ, ಹೋರಾಟ ಸಮಿತಿ ಸಂಚಾಲಕ.

"ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದ್ದು, ಅಂಗಡಿ, ರಿಕ್ಷಾ ಮೊದಲಾದ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಸ್ವಾವಲಂಬಿ ಬದುಕು ರೂಢಿಸಿಕೊಂಡು ಪರಿಸರದ ಆದಾಯ ಹೆಚ್ಚಲಿದೆ. ಜನರ ಮತ ಪಡೆದು ಗೆದ್ದ ಜನಪ್ರತಿನಿಧಿಗಳಿಗೆ ಇಲ್ಲಿನ ಗ್ರಾಮಸ್ಥರ ಹಾಗೂ ಆದಾಯದ ಬಗ್ಗೆ ಕಡೆಗಣಿಸುತ್ತಿದ್ದಾರೆ. ಜನರ ಸಮಸ್ಯೆ ಬಗ್ಗೆ ಕಿಂಚಿತ್ ಪ್ರಜ್ಞೆಯಿಲ್ಲ. ಕೇಂದ್ರದ ಗದ್ದುಗೆಯಲ್ಲಿರುವ ಲೋಕಸಭಾ ಸದಸ್ಯರು ರೈಲು ನಿಲ್ದಾಣದ ಸಮಸ್ಯೆ, ರೈಲು ನಿಲುಗಡೆ ಬಗ್ಗೆ ಸಂಸತ್ತಿನಲ್ಲಿ ಧ್ವನಿಎತ್ತಿಲ್ಲ".

-ಸುರೇಶ್ ಕಲ್ಲಾಗರ, ಸಿಐಟಿಯು ಉಡುಪಿ ಜಿಲ್ಲಾ ಮುಖಂಡ.

"ಇಲ್ಲಿಗೆ ಸಮೀಪದ ಗಂಗೊಳ್ಳಿ ಮೀನುಗಾರಿಕಾ ಬಂದರಾಗಿದ್ದು, ಮೀನನ್ನು ಗೂಡ್ಸ್ ರೈಲು ಮೂಲಕ ಕೇರಳ, ಮುಂಬಯಿ ಮತ್ತು ಬೆಂಗಳೂರಿಗೆ ಸಾಗಾಟ ಮಾಡುವುದರಿಂದ ರೈಲ್ವೆ ಇಲಾಖೆಗೂ ಲಾಭವಾಗಲಿದೆ. ಮೀನುಗಾರಿಕಾ ಉದ್ಯಮದ ಬೆಳವಣಿಗೆಗೆ ಅನುಕೂಲವಾಗಲಿದೆ. ಸಂಸತ್ ಸದಸ್ಯರು ಈ ಬಗ್ಗೆ ತುರ್ತು ಕ್ರಮವಹಿಸಬೇಕು".

-ಬಾಲಕೃಷ್ಣ ಶೆಟ್ಟಿ, ಸಿಐಟಿಯು ಜಿಲ್ಲಾ ಮುಖಂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News