ಉಡುಪಿ: ಸಂವಿಧಾನ ಜಾಗೃತಿಗಾಗಿ ಬೈಕ್ ರ‍್ಯಾಲಿ
ಉಡುಪಿ: ನಮ್ಮ ದೇಶದ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ನಾಗರಿಕರು ನಡೆಯುವುದರೊಂದಿಗೆ ಅದರ ಶ್ರೇಷ್ಠತೆ ಯನ್ನು ಎತ್ತಿ ಹಿಡಿದು ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಯುವಜನತೆಗೆ ಕರೆ ನೀಡಿದ್ದಾರೆ.
ರವಿವಾರ ಮುಂಜಾನೆ ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ನಗರಸಭೆ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಆಯೋಜಿಸಿದ ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂವಿಧಾನವು ಸಮಾನತೆ, ಭ್ರಾತೃತ್ವ, ರಾಷ್ಟ್ರೀಯ ಏಕತೆ ತರುವಲ್ಲಿ ತನ್ನದೇ ಆದ ಪಾತ್ರವಹಿಸಿದೆ. ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಜಾಗೃತಿ ಜಾಥಾ ಮೂಲಕ ಮಾಡುತ್ತಿದೆ. ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯುತ್ತಿದೆ ಎಂದವರು ನುಡಿದರು.
ಸಂವಿಧಾನ ರಚನೆಗೊಂಡು 75 ವರ್ಷ ತುಂಬಿದ ಹಿನ್ನೆಲೆ ಇಡೀ ರಾಜ್ಯದ್ಯಂತ ಹೆಮ್ಮೆಯಿಂದ ನಮ್ಮ ಸಂವಿಧಾನದ ಮಹತ್ವ ಸಾರಲು ಸಂಭ್ರಮ ಸಡಗರದೊಂದಿಗೆ ಆಂದೋಲದ ರೀತಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾಗೃತಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಎಸ್ ಟಿ, ಪೌರಾಯುಕ್ತ ರಾಯಪ್ಪ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.