ಜನಪದ ಕಲೆಯ ದಾಖಲೀಕರಣ ಇಂದಿನ ತುರ್ತು ಅಗತ್ಯ: ಡಾ.ಬಾಲಾಜಿ
ಉಡುಪಿ, ಫೆ.20: ಜನಪದ ಕಲೆಯನ್ನು ದಾಖಲೀಕರಣ ಮಾಡಬೇಕಾದ ತುರ್ತು ಅವಶ್ಯಕತೆ ಇದ್ದು, ಮುಂದಿನ ಪೀಳಿಗೆಗೆ ಈ ಕಲೆಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇದೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಹೇಳಿದ್ದಾರೆ.
ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಚಿಟ್ಪಾಡಿ ಸೈಂಟ್ ಮೇರಿಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾದ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಪದ ಪ್ರಧಾನ ಸಮಾರಂಭವನ್ನು ಚೆಂಡೆವಾದನದ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಶೋಕ ಮಾತ ಚರ್ಚಿನ ಸಹಾಯಕ ಧರ್ಮಗುರು ಮೇಲ್ವಿನ್ ರೋಯ್ ಲೋಬೋ ವಹಿಸಿದ್ದರು. ಮೂಡುಸಗ್ರಿ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಗುಂಡಿಬೈಲು ಶುಭ ಹಾರೈಸಿದರು. ವೇದಿಕೆಯಲ್ಲಿ ಸೈಂಟ್ ಮೇರಿಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ವಿಜಯ್, ಉಡುಪಿ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಉಪಸ್ಥಿತರಿದ್ದರು.
ಈ ಸಂದರ್ಭ ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಕಲಾವಿದ ಗಂಗಾಧರ ಕಿದಿಯೂರು, ಸುರಭಿ ಮಹಿಳಾ ಚೆಂಡೆ ವಾದನ ಬಳಗದ ಸುನಂದ ಗೋಪಾಲ ಗಾಣಿಗ ಬೈಂದೂರು ಅವರನ್ನು ಸನ್ಮಾನಿಸಲಾಯಿತು.
ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಮತ್ತು ಜಿಲ್ಲಾಧ್ಯಕ್ಷ ಗಣೇಶ್ ಕುಮಾರ್ ಗಂಗೊಳ್ಳಿ ಅವರನ್ನು ಗೌರವಿಸಲಾಯಿತು. ಡಾ.ಗಣೇಶ್ ಗಂಗೊಳ್ಳಿ ನೇತೃತ್ವದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಉದಯ ಕುಮಾರ್ ಹೈಕಾಡಿ ಸ್ವಾಗತಿಸಿದರು. ಚಂದ್ರ ಹಂಗಾರಕಟ್ಟೆ, ಫಾರೂಕ್ ಚಂದ್ರ ನಗರ ಪರಿಚಯಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಸುವರ್ಣ ಕಟಪಾಡಿ ವಂದಿಸಿದರು.
ಸುರಭಿ ಮಹಿಳಾ ಚೆಂಡೆ ವಾದನ ಬಳಗದಿಂದ ಚೆಂಡೆ ವಾದನ ಪ್ರದರ್ಶನ ಮತ್ತು ಜಾನಪದ ಕಲಾವಿದರಾದ ಗಣೇಶ್ ಗಂಗೊಳ್ಳಿ, ಅಶ್ವಿನಿ ಸುವರ್ಣ ಪಡುಬಿದ್ರೆ, ವಸಂತಿ ಕಡಂಬಳ ಕಾರ್ಕಳ, ರಮಣಿ ರವಿ ಬೈಂದೂರು ಅವರಿಂದ ಜಾನಪದ ಗಾಯನ ನಡೆಯಿತು. ಹಿಮ್ಮೇಳದಲ್ಲಿ ರೋಹಿತ್ ಕುಮಾರ್ ಮಲ್ಪೆ, ಸುರೇಶ್ ಲಕ್ಷ್ಮೀನಗರ ಸಹಕರಿಸಿದರು.