×
Ad

ಸಂವಿಧಾನದ ಕರ್ತವ್ಯಗಳನ್ನು ಪ್ರತಿಯೊಬ್ಬರು ತಪ್ಪದೇ ಪಾಲಿಸಿ:ಎಡಿಸಿ ಮಮತಾದೇವಿ

Update: 2024-02-20 21:09 IST

ಉಡುಪಿ: ದೇಶದ ನಾಗರಿಕರು ಸಂವಿಧಾನದಡಿಯಲ್ಲಿ ನೀಡಿರುವ ಹಕ್ಕುಗಳನ್ನು ಪಡೆದುಕೊಳ್ಳುವ ರೀತಿಯಲ್ಲಿಯೇ ಸಂವಿಧಾನದ ಕರ್ತವ್ಯಗಳನ್ನು ಸಹ ಪ್ರತಿಯೊಬ್ಬರೂ ಪಾಲಿಸುವ ಬದ್ಧತೆಯನ್ನು ತೋರಿಸಬೇಕು ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್ ಹೇಳಿದ್ದಾರೆ.

ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಮಂಗಳವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ.ಬಿ.ಆರ್ ಅಂಬೇಡ್ಕರ್‌ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಿದ್ದರು.

ಜಿಲ್ಲೆಯಾದ್ಯಂತ ಸಂಚರಿಸಿದ ಸಂವಿಧಾನ ಜಾಗೃತಿ ಜಾಥಾದಿಂದ ಸಂವಿಧಾನದ ಕುರಿತು ಸಾಕಷ್ಟು ಅರ್ಥವನ್ನು ಕಂಡುಕೊಂಡಿದ್ದೇವೆ. ಸಂವಿಧಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಜಾಗೃತಿಯನ್ನು ಹೆಚ್ಚಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತದ ನಾಗರಿಕರು ತಮಗಿರುವ ಹಕ್ಕುಗಳನ್ನು ಧ್ವನಿಯೇರಿಸುವ ಮೂಲಕ ಪಡೆದು ಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಂವಿಧಾನ ನಮಗೆ ದಾರಿದೀಪವಾಗಿದೆ ಎಂದರು.

ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ಸಂವಿಧಾನ ಜಾಗೃತಿ ಕಾರ್ಯಕ್ರಮದ ಉದ್ದೇಶಗಳು ಇಲ್ಲಿಗೆ ಮುಗಿಯುವುದಿಲ್ಲ. ನಮ್ಮ ನಡೆ ನುಡಿಗಳಲ್ಲಿ ದೇಶದ ಬಗ್ಗೆ ಗೌರವ ಹೊಂದಿರಬೇಕು. ಯುವಶಕ್ತಿ ದೇಶದ ಶಕ್ತಿಯಾಗಿದ್ದು, ಅವರನ್ನು ಜಾಗೃತಗೊಳಿಸಬೇಕು. ವಿದ್ಯಾಭ್ಯಾಸದ ಜೊತೆ ಜೊತೆಗೆ ದೇಶದ ರಕ್ಷಣೆಯ ಸಂದರ್ಭದಲ್ಲಿ ಯುವಜನತೆ ಮುಂದಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಸಂವಿಧಾನ ಪೀಠಿಕೆ ಯನ್ನು ಬೋಧಿಸಿದರು. ಅಶ್ಮಿತ್ ಎ.ಜೆ ಸಂವಿಧಾನ ಪೀಠಿಕೆ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

ಈ ಸಂದರ್ಭದಲ್ಲಿ ಸಂವಿಧಾನ ಜಾಗೃತಿ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂಬೇಡ್ಕರ್ ಭಾವಚಿತ್ರವನ್ನು ರಂಗೋಲಿ ಹಾಗೂ ತೆಂಗಿನ ಗರಿಗಳಲ್ಲಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಜಯಂತಿ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಸವಿತಾ ಹರೀಶ್‌ರಾಮ್, ಹರೀಶ್ ಶೆಟ್ಟಿ, ಪ್ರಭಾಕರ ಪೂಜಾರಿ, ಎಎಸ್ಪಿ ಸಿದ್ದಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News