ರಾಷ್ಟ್ರೀಯ ಪಕ್ಷಗಳಿಂದ ಪ್ರಜಾಪ್ರಭುತ್ವದ ಆಶಯ ಮಣ್ಣುಪಾಲು: ರವಿಕೃಷ್ಣಾ ರೆಡ್ಡಿ
ಉಡುಪಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕರ್ನಾಟಕಕ್ಕಾಗಿ ನಾವು ಎಂಬ ಹೆಸರಿನಲ್ಲಿ ದೇವನಹಳ್ಳಿಯಿಂದ ಫೆ.19ರಂದು ಆರಂಭಗೊಂಡ ರಾಜ್ಯವ್ಯಾಪಿ 13 ದಿನಗಳ 3000 ಕಿ.ಮೀ.ಗಳ ಬೈಕ್ ಜಾಥಾವು ಇಂದು ಉಡುಪಿ ನಗರ ಪ್ರವೇಶಿಸಿತು.
ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರುದ್ದೇಶಿಸಿ ಮಾತನಾಡಿದ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ, ಭ್ರಷ್ಟರನ್ನು, ಅಪ್ರಾಮಾಣಿಕ ರನ್ನು, ಸ್ವಜನ ಪಕ್ಷಪಾತಿಗಳನ್ನು, ಅನೈತಿಕ ನಡವಳಿಕೆ ಉಳ್ಳವರನ್ನು, ಸುಳ್ಳರನ್ನು, ಸಮಾಜ ಘಾತುಕ ಶಕ್ತಿಗಳನ್ನು, ಕುಟುಂಬ ರಾಜಕಾರಣದ ಮೂಲಕ ಪ್ರಜಾ ಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆ.ಸಿ.ಬಿ. ಪಕ್ಷಗಳ ಸ್ವಾರ್ಥಿ ರಾಜಕಾರಣಿಗಳನ್ನು ತಮ್ಮ ಮತ್ತು ತಮ್ಮ ಮಕ್ಕಳ ರಾಜಕೀಯ ನಾಯಕರೆಂದು ಒಪ್ಪಿಕೊಳ್ಳದೆ ಜನಪರ ಕಾಳಜಿಯ, ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್ ಮಾತನಾಡಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
ಬೈಕ್ ಜಾಥಾದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್.ಎಚ್., ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್., ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ಸಂಘಟನಾ ಕಾರ್ಯದರ್ಶಿ ಎಲ್.ಜೀವನ್, ಚಂದ್ರಶೇಖರ್ ಮಠದ, ಬಿ.ಜಿ. ಕುಂಬಾರ, ಪ್ರವೀಣ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಸುನಿತಾ ಮೊದಲಾದವರು ಉಪಸ್ಥಿತರಿದ್ದರು.
‘ವಿದ್ಯಾವಂತರ, ಬುದ್ದಿವಂತರ ಜಿಲ್ಲೆ ಎನಿಸಿರುವ ಉಡುಪಿ ಜಿಲ್ಲೆಯ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಹಾಗಾದರೆ ವಿದ್ಯಾವಂತರು, ಸಾಕ್ಷರತರು ಹಾಗೂ ಬುದ್ದಿವಂತರೆಂದು ಹೇಳಿಕೊಳ್ಳುವುದರಲ್ಲಿ ಏನು ಅರ್ಥ ಏನಿದೆ. ಇದಕ್ಕೆ ನಾವು ಖದೀಮರನ್ನು ಕ್ರಿಮಿನಲ್‌ಗಳನ್ನು ಅಯೋಗ್ಯ ರನ್ನು ನಮ್ಮ ಜನಪ್ರತಿನಿಧಿ ಗಳನ್ನಾಗಿಸಿ ಆಯ್ಕೆ ಮಾಡುತ್ತಿರುವುದೇ ಕಾರಣ. ಆದುದರಿಂದ ಮುಂದೆ ಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಹಣ ಹಂಚದ, ಹೆಂಡ ಕುಡಿಸದ, ಜನರಿಗೆ ಮೋಸದ ಮಾಡದ ಕೆಎಸ್‌ಆರ್ ಪಕ್ಷವನ್ನು ಬೆಂಬಲಿಸಿ ಒಳ್ಳೆಯ ರಾಮರಾಜ್ಯ ನಿರ್ಮಾಣಕ್ಕೆ ಮುಂದಾಗಬೇಕು’
-ರವಿಕೃಷ್ಣಾ ರೆಡ್ಡಿ, ರಾಜ್ಯಾಧ್ಯಕ್ಷರು, ಕೆಆರ್‌ಎಸ್ ಪಕ್ಷ