×
Ad

ಸೀತಾನದಿ ಹಿನ್ನೀರಿನಲ್ಲಿ ದೋಣಿ ಮೂಲಕ ಸಂವಿಧಾನ ಜಾಗೃತಿ

Update: 2024-02-23 19:52 IST

ಉಡುಪಿ, ಫೆ.23: ರಾಜ್ಯದಲ್ಲಿ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್‌ನಲ್ಲಿ ವಿನೂತನ ರೀತಿಯಲ್ಲಿ ಪ್ರವಾಸಿ ಬೋಟುಗಳನ್ನು ಸಂವಿಧಾನ ಜಾಗೃತಿ ಪಥವನ್ನಾಗಿ ವಿನ್ಯಾಸಗೊಳಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿಶಿಷ್ಟ ರೀತಿಯಲ್ಲಿ ಸಂವಿಧಾನ ಜಾಗೃತಿ ನಡೆಸಲಾಯಿತು.

ಅದೇ ರೀತಿ ಸೀತಾನದಿಯಲ್ಲಿ ಕಯಾಕಿಂಗ್ ಮೂಲಕ ತೆರಳಿ ಕಾಂಡ್ಲವನ (ಮ್ಯಾಂಗ್ರೋ) ಕಾಡುಗಳ ಮಧ್ಯೆ ನೀರಿನಲ್ಲಿ ‘75’ ಎಂದು ಕಯಾಕಿಂಗ್ ದೋಣಿಗಳನ್ನು ಬಳಸಿ ನೀರಿನ ಮೇಲೆ ವಿನ್ಯಾಸಗೊಳಿಸಲಾಯಿತು.

ಸಾಲಿಗ್ರಾಮದ ಪಾರಂಪಳ್ಳಿಯಲ್ಲಿರುವ ಕಯಾಕಿಂಗ್ ಪಾಯಿಂಟ್‌ನಲ್ಲಿ ವಿನೂತನ ಪ್ರಯೋಗಗಳ ಮೂಲಕ ಜನಜಾಗ್ರತಿ ಮೂಡಿಸುವ ಕೆಲಸ ಮಾಡುತ್ತಿರುವುದು ಇದೇ ಪ್ರಥಮವಲ್ಲ. ಈ ಮೊದಲು ಕಳೆದ ಚುನಾವಣೆಯ ವೇಳೆ ಇಲ್ಲಿ ಮೊದಲು ಮತದಾನ ಜಾಗ್ರತಿ, ಪ್ಲಾಸ್ಟಿಕ್ ಜಾಗ್ರತಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳನ್ನು ಸಹ ನವನವೀನ ಮಾದರಿ ಪ್ರಯೋಗಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗಿತ್ತು.

ಇದೀಗ ಸಂವಿಧಾನ ಜಾಗ್ರತಿ ಕಾರ್ಯಕ್ರಮವನ್ನು ಪ್ರಕೃತಿ ಮಡಿಲಲ್ಲಿ ಮಾಡಲಾಗಿದೆ. ದೇಶ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳನ್ನು ಪೂರ್ಣಗೊಳಿಸಿದ ಪ್ರಯುಕ್ತ ‘75’ ಅಂಕಿಯನ್ನು ಕಯಾಕಿಂಗ್ ದೋಣಿಗಳ ಮೂಲಕ ರಚಿಸಲಾಗಿತ್ತು.

ಈ ಸಂದರ್ಭದಲ್ಲಿ ಸಿಇಓ ಪ್ರತೀಕ್ ಬಾಯಲ್, ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್., ಉಡುಪಿ ಎಡಿಸಿ ಮಮತಾ ದೇವಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕಿ ಅನಿತಾ ಮಡ್ಲೂರು, ಪ್ರೋಬೇಷನರಿ ಐಪಿಎಸ್ ಅಧಿಕಾರಿ ಹರ್ಷ ಪ್ರಿಯಂವದ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಶಿವ ನಾಯ್ಕ, ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ಮುಖ್ಯಸ್ಥ ಮಿಥುನ್ ಕುಮಾರ್ ಮೆಂಡನ್, ಲೋಕೇಶ್, ವಿನಯ್ ಮುಂತಾದವರು ಉಪಸ್ಥಿತರಿದ್ದರು.






 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News