×
Ad

ಭಾರತದ ಸಂವಿಧಾನ ಇಡೀ ದೇಶದ ಆತ್ಮ ಚರಿತ್ರೆ: ಆತ್ರಾಡಿ ಅಮೃತಾ ಶೆಟ್ಟಿ

Update: 2024-02-24 14:56 IST

ಉಡುಪಿ, ಫೆ.24: ದೇಶದ ಐಕ್ಯತೆ ಉಳಿಸಿಕೊಳ್ಳುವ ಜವಾಬ್ದಾರಿ ಸಂವಿಧಾನ ನಮ್ಮೆಲ್ಲರಿಗೆ ಕೊಟ್ಟಿದೆ. ವಿವಿಧ ಧರ್ಮ, ವಿವಿಧ ಜಾತಿ, ವಿವಿಧ ಭಾಷೆ, ವಿವಿಧ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಈ ದೇಶದ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ ಈ ಬಹುತ್ವವನ್ನು ನಾವು ಕಾಪಾಡಿಕೊಳ್ಳಬೇಕು ಮತ್ತು ಬಹುವಚನವನ್ನು ಉಳಿಸಿಕೊಳ್ಳಬೇಕು ಎಂದು ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿ ಹೇಳಿದ್ದಾರೆ.

ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸುವರ್ಣ ಸಂಭ್ರಮ ವರ್ಷದ ಫೆಬ್ರವರಿ ತಿಂಗಳ ಕಾರ್ಯಕ್ರಮವಾಗಿ ಉದ್ಯಾವರ ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾದ ’ಸಂವಿಧಾನ ತಿಳಿಯೋಣ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.

ಒಂದು ದೇಶಕ್ಕೆ ಆತ್ಮಚರಿತ್ರೆ ಇದೆಯಾದರೆ, ಅದರ ಒಂದು ತುಣುಕು ಪ್ರತಿಯೊಬ್ಬರ ಆತ್ಮ ಚರಿತ್ರೆ. ಹಾಗಾಗಿ ಅದು ನಮ್ಮೆಲ್ಲರ ಆತ್ಮಚರಿತ್ರೆ. ಈ ನಿಟ್ಟಿನಲ್ಲಿ ಭಾರತ ದೇಶದ ಸಂವಿಧಾನ ನಮ್ಮೆಲ್ಲರ ಆತ್ಮಚರಿತ್ರೆ ಅಂದರೆ ಸಾಲದು. ಅದು ಭಾರತ ದೇಶದ ಆತ್ಮ ಚರಿತ್ರೆ ಎಂದ ಅವರು, ಬಹುವಚನ ಭಾರತವನ್ನು ಉಳಿಸಿಕೊಳ್ಳುವುದಕ್ಕೆ ಸಂವಿಧಾನ ನಮಗೆ ದಾರಿ ತೋರಿಸುತ್ತದೆ. ಹಾಗಾಗಿ ನಮ್ಮ ಸಂವಿಧಾನ ದೇಶದ ಆತ್ಮಚರಿತ್ರೆ ಎಂದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ರಚಿಸಿದ್ದು ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತೆಯ ತಳಪಾಯದ ಮೇಲೆ. ಅವರ ಆಶಯಕ್ಕೆ ಭಂಗ ಬರದಂತೆ ಸಂವಿಧಾನದ ಮೂಲ ತತ್ವಕ್ಕೆ ವ್ಯತ್ಯಾಯವಾಗದಂತೆ ನಾವು ಅದನ್ನು ಉಳಿಸಿಕೊಳ್ಳಬೇಕು. ನಾವು ಹಿರಿಯರು ಬೇಕಾದಷ್ಟು ತಪ್ಪುಗಳನ್ನು ಮಾಡಿ ಮಕ್ಕಳೇ ನಿಮ್ಮ ಹೆಗಲಿಗೆ ಅದನ್ನು ದಾಟಿಸಿದ್ದೇವೆ. ಆದರೆ ನೀವು ದಯಮಾಡಿ ಅಂತ ತಪ್ಪುಗಳನ್ನು ಮಾಡಿ ಮುಂದಿನ ಪೀಳಿಗೆಗೆ ದಾಟಿಸಬೇಡಿ. ಹಾಗಾಗಿ ಸಂವಿಧಾನದ ಚೌಕಟ್ಟಲ್ಲಿ ಬದುಕಲು ಪ್ರಯತ್ನವನ್ನು ಮಾಡಿ ಎಂದು ಅವರು ಕಿವಿಮಾತು ಹೇಳಿದರು.

ಸಂವಿಧಾನದಲ್ಲಿರುವ ಹಕ್ಕು ನಮಗೆ ಸಿಕ್ಕಿಲ್ಲವಾದರೆ ಕಾನೂನಾತ್ಮಕವಾಗಿ ಅದನ್ನು ಪಡೆದುಕೊಳ್ಳುವ ಅವಕಾಶ ನಮಗೆ ಸಂವಿಧಾನ ನೀಡಿದೆ. ಸಮಾಜದಲ್ಲಿ ನಮ್ಮನ್ನು ನಾವು ಏನು ಎಂದು ನಿರೂಪಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ. ಸಂವಿಧಾನ ಯಾವತ್ತೂ ಕೂಡ ಪಕ್ಷಪಾತಿಯಾಗಿ ವರ್ತಿಸಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಹಿತ ಕಾಯುವಲ್ಲಿ ಸಂವಿಧಾನ ಬದ್ಧವಾಗಿದೆ. ಈ ಸಂವಿಧಾನಕ್ಕೆ ಚ್ಯುತಿ ಬರದಂತೆ ಮುಂದಿನ ಪೀಳಿಗೆ ಇದನ್ನ ಉಳಿಸಬೇಕಾಗಿದೆ. ಈ ಸಂವಿಧಾನ ಒಳ್ಳೆಯವರ ಕೈಗೆ ಸಿಗುವಂತೆ ತಾವು ಪ್ರಯತ್ನಿಸಬೇಕು ಎಂದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಾ ತಾವ್ರೊ ಉಪಸ್ಥಿತರಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲಾ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಹಾಡಿದರು. ಅಧ್ಯಕ್ಷ ತಿಲಕ್ ರಾಜ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಆಶಾವಾಸು ಸಂವಿಧಾನ ಪೀಠಿಕೆಯ ಪ್ರತಿಜ್ಞೆಯನ್ನು ಬೋಧಿಸಿದರು. ಸದಸ್ಯೆ ಮೇರಿ ಡಿಸೋಜ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ ವಾಣಿ ಪೆರಿಯೋಡಿಯವರ ’ಮಕ್ಕಳಿಗಾಗಿ ಸಂವಿಧಾನ’ ಕೃತಿಯನ್ನು ವಿತರಿಸಲಾಯಿತು.

 

‘ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯ ಈ ದೇಶದ ಉಸಿರು. ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ನಮ್ಮ ಅಭಿವೃದ್ಧಿಗಾಗಿ ಯಾವುದೇ ರಕ್ತ ಸುರಿಸದೆ ನಾವು ಪಡೆದುಕೊಳ್ಳಬಹುದಾದ ಆಯುಧವನ್ನು ಸಂವಿಧಾನ ನಮಗೆ ಕೊಟ್ಟಿರುತ್ತದೆ. ಸಂವಿಧಾನದ ಪೀಠಿಕೆಯನ್ನು ನಾವು ಪ್ರತಿಜ್ಞೆಯಾಗಿ ಸ್ವೀಕರಿಸಿದ್ದೇವೆ. ಅದನ್ನು ಉಲ್ಲಂಘಿಸಿದಾಗ ನಮ್ಮಲ್ಲಿ ಕೀಳರಿಮೆ ತಳಮಳವಾಗಬೇಕು. ಆಗ ಮಾತ್ರ ಸಂವಿಧಾನ ಉಳಿಯುತ್ತದೆ’

-ಆತ್ರಾಡಿ ಅಮೃತಾ ಶೆಟ್ಟಿ, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News