ಕೈಮಗ್ಗ ನೇಯ್ಗೆ ಕೇಂದ್ರ -ಕೈಮಗ್ಗ ನೇಯ್ಗೆ ತರಬೇತಿ ಉದ್ಘಾಟನೆ
ಉಡುಪಿ: ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನೇಕಾರರ ಸೇವಾ ಕೇಂದ್ರ ಬೆಂಗಳೂರು ಕೈಮಗ್ಗ ಮತ್ತು ಜವಳಿ ಇಲಾಖೆ, ನಬಾರ್ಡ್, ರೋಬೋಸಾಫ್ಟ್ (ಸಿಎಸ್‌ಆರ್ ನಿಧಿ) ಸಹಕಾರದೊಂದಿಗೆ ನೂತನ ಬೃಹತ್ ಕೈಮಗ್ಗ ನೇಯ್ಗೆ ಕೇಂದ್ರ ಮತ್ತು ಮಹಿಳೆಯರಿಗಾಗಿ 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿ ಶನಿವಾರ ಬನ್ನಂಜೆಯ ಹಳೆ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿ ವೃತ್ತಿಯಾಧಾರಿತ ಕುಲ ಕಸುಬು ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪದ್ಮಶಾಲಿ, ಮೊಗವೀರ, ವಿಶ್ವಕರ್ಮ, ಬಿಲ್ಲವರು ಅವರವರ ಕಸುಬಿನ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ವೃತ್ತಿ ಆಧಾರಿತ ಕುಲಕಸುಬನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು. ಉಡುಪಿ ಸೀರೆಯನ್ನು ಬ್ರ್ಯಾಂಡ್ ಮಾಡುವ ಮೂಲಕ ದೇಶ-ವಿಶ್ವಕ್ಕೆ ಹಬ್ಬಿಸುವ ಕೆಲಸವಾಗಬೇಕು. ಸರಕಾರ ಕುಲಕಸುಬು ಉದ್ಯಮಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ನಬಾರ್ಡ್ ಚೀಫ್ ಜನರಲ್ ಮ್ಯಾನೇಜರ್ ಟಿ.ರಮೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ರೋಬೋ ಸಾಫ್ಟ್ ಟೆಕ್ನಾಲಜಿಸ್‌ನ ಗುಣಮಟ್ಟ ನಿರ್ವಹಣೆಯ ಉಪಾಧ್ಯಕ್ಷ ಶ್ರೀಧರನ್ ಕೇಶವನ್, ನಬಾರ್ಡ್‌ನ ಡೆಪ್ಯೂಟಿ ರೀಜನಲ್ ಮ್ಯಾನೇಜರ್ ಸಂಗೀತಾ ಕರ್ತ, ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ಕುಂದಾಪುರದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್, ಏಸ್ ಟೆಕ್ನೋಕ್ರ್ಯಾಟ್ಸ್ ಲಿ.ನಿರ್ದೇಶಕ ಭಗವಾನ್ ದಾಸ್ ಕೆ., ನೇಕಾರರ ಸೇವಾ ಕೇಂದ್ರದ ಮೋಹನ್, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್, ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನರೇಂದ್ರ ಶೆಟ್ಟಿಗಾರ್ ಹೆರ್ಗ ಉಪಸ್ಥಿತರಿದ್ದರು.
ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಉಪಾಧ್ಯಕ್ಷ ಮಂಜುನಾಥ ಮಣಿಪಾಲ ಸ್ವಾಗತಿಸಿದರು. ನಾಗರಾಜ್ ಕಿನ್ನಿಮೂಲ್ಕಿ ಹಾಗೂ ಮಮತಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.