ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಇನ್ನು ಸಾಧ್ಯವಿಲ್ಲ: ಕೆ.ಜಯಪ್ರಕಾಶ್ ಹೆಗ್ಡೆ ಅಭಿಮತ
ಉಡುಪಿ: ಕಳೆದ ಸುಮಾರು ಎರಡು ದಶಕಗಳಿಂದ ಉತ್ಪಾದನೆ ನಿಲ್ಲಿಸಿರುವ ಕರಾವಳಿ ಕರ್ನಾಟಕದ ಏಕೈಕ ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆ ಎನಿಸಿದ ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರುಜ್ಜೀವನ ಇನ್ನು ಸಾಧ್ಯವಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ, ಕಾರ್ಖಾನೆಯ ಮಾಜಿ ಅಧ್ಯಕ್ಷರೂ ಆಗಿರುವ ಕೆ.ಜಯಪ್ರಕಾಶ್ ಹೆಗ್ಡೆ ತನ್ನ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಿಡ್ಬಿ, ವಿಟಿಪಿಸಿ, ಕೆನರಾ ಬ್ಯಾಂಕುಗಳ ಸಹಯೋಗದೊಂದಿಗೆ ಬೆಂಗಳೂರಿನ ಕಾಸಿಯಾ(ಕೆಎಎಸ್‌ಎಸ್‌ಐಎ) ಸಹಯೋಗದೊಂದಿಗೆ ನಗರದ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಐದು ವರ್ಷಗಳ ಅವಧಿಗೆ ತಾನು ಕಾರ್ಖಾನೆಯ ಅಧ್ಯಕ್ಷನಾಗಿರುವಾಗ ಅದನ್ನು ಲಾಭದಾಯಕ ಸ್ಥಿತಿಗೆ ತರಲು ಶಕ್ತಿಮೀರಿ ಪ್ರಯತ್ನಿಸಿದ್ದೆ. ಆದರೆ ಕೆಲವು ಕಾರಣಗಳಿಂದ ತಾನು ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಎರಡನೇ ವರ್ಷದಲ್ಲಿ ಕಾರ್ಖಾನೆ ಬಾಗಿಲು ಹಾಕುವಂತಾಯಿತು. ಕಾರ್ಖಾನೆಯನ್ನು ಮತ್ತೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದವರು ವಿವರಿಸಿದರು.
ಸದ್ಯ ಸಕ್ಕರೆ ಕಾರ್ಖಾನೆಯ ಹೆಸರಿನಲ್ಲಿರುವ 100 ಎಕರೆ ಭೂಮಿಯನ್ನು ಕೈಗಾರಿಕಾ ಇಲಾಖೆ ಪಡೆದು, ಅಲ್ಲಿ ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸಿ ಸಣ್ಣ ಕೈಗಾರಿಕೆಗಳಿಗೆ ಅಲ್ಲಿ ಅವಕಾಶ ನೀಡಬಹುದು. ಇದರಿಂದ ಜಿಲ್ಲೆಯ ಸಾಕಷ್ಟು ಮಂದಿಗೆ ಉದ್ಯೋಗವೂ ಸಿಗುವಂತಾಗುತ್ತದೆ. ಈ ಬಗ್ಗೆ ವೇದಿಕೆಯಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಗಳು ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬಹುದಾಗಿದೆ ಎಂದವರು ಸಲಹೆ ನೀಡಿದರು.
ಈ ಬಾರಿಯ ಬಜೆಟ್‌ನಲ್ಲಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಸವಲತ್ತು ನೀಡಿಲ್ಲ ಎಂಬುದು ನಿಜ. ಆದರೆ ಎಲ್ಲವನ್ನೂ ಬಜೆಟ್ ಮಂಡನೆಯ ವೇಳೆಯೇ ಪ್ರಕಟಿಸಬೇಕೆಂದಿಲ್ಲ. ನಂತರವೂ ಚರ್ಚೆಯ ವೇಳೆ ಬಜೆಟ್‌ಗೆ ಸೇರಿಸಲು ಸಾಧ್ಯವಿದೆ. ಈ ಬಗ್ಗೆ ಸಿಎಂ ಗಮನಕ್ಕೆ ತಂದರೆ ಬಜೆಟ್‌ಗೆ ಉತ್ತರ ನೀಡುವ ವೇಳೆ ಅದನ್ನು ಸೇರಿಸಬಹುದು. ಅಲ್ಲದೇ ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಅನುದಾನವನ್ನೂ ಉಪಯೋಗಿಸಿಕೊಳ್ಳಬಹುದು ಎಂದರು.
ಅಲ್ಲದೇ ಈಗ ಜಿಎಸ್‌ಟಿಯ ಸಮಸ್ಯೆಯೂ ಇದೆ. ಸಣ್ಣ ಉದ್ಯಮಿಗಳು ಇದರಿಂದ ತುಂಬಾ ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಸಾಕಷ್ಟು ಸಣ್ಣ ಕೈಗಾರಿಕೆಗಳು ಈಗ ಮುಚ್ಚುತ್ತಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಗಳು ಗಮನ ಹರಿಸಬೇಕಿದೆ. ಸಮಸ್ಯೆ ಇದ್ದಾಗ ಸರಕಾರಗಳು ಸಹಾಯ ಮಾಡಬೇಕು ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ (ಎಂಎಸ್‌ಎಂಇ ಹಾಗೂ ಗಣಿ ವಿಭಾಗ) ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರತೀಕ್ ಬಾಯಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ.ನಾಯಕ್, ಸಿಡ್ಬಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕ ಬಿ.ಉಳಗಿಯನ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರೀಶ್ ಕುಂದರ್, ಕಾಸಿಯಾದ ಉಪಾಧ್ಯಕ್ಷ ಎಂ.ಜಿ.ರಾಜಗೋಪಾಲ್, ಕೆನರಾ ಬ್ಯಾಂಕಿನ ಡಿಜಿಎಂ ರಾಜೀವ್ ತುಕ್ರಾಲ್, ಸಂಪನ್ಮೂಲ ವ್ಯಕ್ತಿ ಸಿಎ ಜತಿನ್ ಕ್ರಿಸ್ಟೋಫರ್ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಸಿಯಾದ ಅಧ್ಯಕ್ಷ ಶಶಿಧರ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ಕಾಸಿಯಾ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಣ್ಣ ಕೈಗಾರಿಕೆಗಳ ಕುರಿತು ಅರಿವು ಮೂಡಿಸುವ ಈ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತಿದ್ದು, ಈವರೆಗೆ 16 ಜಿಲ್ಲೆಗಳಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾಸಿಯಾದ ಗೌರವ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜು ವಂದಿಸಿದರು.