ರಕ್ತಕ್ಕೆ ಜಾತಿ-ಧರ್ಮದ ಬೇಧವಿಲ್ಲ: ಜಯಪ್ರಕಾಶ್ ಹೆಗ್ಡೆ
ಕುಂದಾಪುರ: ರಕ್ತಕ್ಕೆ ಯಾವ ವ್ಯಕ್ತಿ, ಯಾವ ಜಾತಿ ಎಂಬುದು ತಿಳಿದಿಲ್ಲ. ಅಗತ್ಯ ಸಂದರ್ಭದಲ್ಲಿ ರಕ್ತದ ವಿಚಾರ ಬಂದಾಗ ಜಾತಿ-ಧರ್ಮ ಹುಡುಕುವುದು ಸಾಧ್ಯವಿಲ್ಲ ಎಂಬುದನ್ನು ಎಲ್ಲರು ಅರಿಯಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.
ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇವರ ಆಶ್ರಯದಲ್ಲಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಮಣಿಪಾಲ ಕೆಎಂಸಿ ರಕ್ತ ನಿಧಿ ವಿಭಾಗದ ಸಹಯೋಗ ದೊಂದಿಗೆ ‘ಸ್ಪಂದನ- 2024’ ಅಂಗವಾಗಿ ರವಿವಾರ ವಕ್ವಾಡಿ ಶ್ರೀಮಹಾ ಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರ ಹಾಗೂ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಕ್ತದಾನ ಮಾಡುವ ಧೈರ್ಯದ ಜೊತೆಗೆ ವಿಶಾಲ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಹಿಂದೆಗೆ ಹೋಲಿಸಿ ದರೆ ಈಗ ರಕ್ತದಾನದ ಬಗೆಗಿನ ಭಯದ ಸ್ಥಿತಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಲು ಇಂತಹ ಸಂಘಟನೆಗಳು ಇನ್ನಷ್ಟು ಮುಂದೆ ಬರಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಜನರಲ್ಲಿ ರಕ್ತದಾನದ ಬಗ್ಗೆ ಇರುವ ಭಯ, ಗೊಂದಲ ನಿವಾರಣೆಯಾಗಬೇಕು. ಸ್ವತಃ ಅರಿವಿಗೆ ಬಂದಾಗ ರಕ್ತದ ಮಹತ್ವ ತಿಳಿಯುತ್ತದೆ ಎಂದರು.
ಅಧ್ಯಕ್ಷತೆಯನ್ನು ವಕ್ವಾಡಿ ಫ್ರೆಂಡ್ಸ್ ಅಧ್ಯಕ್ಷ ನವೀನ್ ವಹಿಸಿದ್ದರು. ನ್ಯಾಯವಾದಿ ಎಂ.ಕೆ.ಸುವೃತ್ ಕುಮಾರ್ ಕಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ರಕ್ತದ ಆಪತ್ಪಾಂದವ ಸತೀಶ್ ಸಾಲಿಯಾನ್, ಮಣಿಪಾಲದ ತಪೋವನ ಎಂಡಿ ಡಾ.ವಾಣಿಶ್ರೀ ಐತಾಳ್, ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ.ಸುಮಾಂಕಿತ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷಿಕ ಬಾಬುರಾಯ್ ಆಚಾರ್, ರಂಗಕರ್ಮಿ ವಾಸುದೇವ ಶೆಟ್ಟಿಗಾರ್, ಭಜನೆಕಾರ ರಾಜು ದೇವಾಡಿಗ, ರಕ್ತದಾನಿ ಶರತ್ ಕಾಂಚನ್ ಆನಗಳ್ಳಿ ಅವರನ್ನು ಸನ್ಮಾನಿಸಲಾಯಿತು. ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಕೀರ್ತಿ ಶೆಟ್ಟಿ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಕ್ವಾಡಿ ಫ್ರೆಂಡ್ಸ್ ಸದಸ್ಯೆ ಮೂಕಾಂಬಿಕಾ ಸ್ವಾಗತಿಸಿದರು. ಕೃಷ್ಣ ಶೆಟ್ಟಿಗಾರ್ ವಂದಿಸಿದರು.