ಗಂಗೊಳ್ಳಿ ಪಂಜುರ್ಲಿ ದೈವಸ್ಥಾನದ ಬಳಿ ತೆರೆದ ಚರಂಡಿ ದುರಸ್ತಿಗೆ ಆಗ್ರಹಿಸಿ ಧರಣಿ
ಕುಂದಾಪುರ: ಗಂಗೊಳ್ಳಿ ಗ್ರಾಮದ ಪಂಜುರ್ಲಿ ದೈವಸ್ಥಾನದ ಸಮೀಪದ ತೆರೆದ ಚರಂಡಿಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಪರಿಸರದ ನಾಗರಿಕರು ರವಿವಾರ ಧರಣಿ ನಡೆಸಿದರು.
ಪಂಜುರ್ಲಿ ತೋಡು ಸೇತುವೆಯ ಸಮೀಪದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದ ನೂರಾರು ಸಂಖ್ಯೆಯ ಮಕ್ಕಳು, ಮಹಿಳೆಯರು ಹಾಗೂ ನಾಗರಿಕರು ತೋಡು ಅಭಿವೃದ್ಧಿಪಡಿಸಿ ಜನರನ್ನು ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಿಸುವಂತೆ ಆಗ್ರಹಿಸಿದರು. ಜನಪ್ರತಿನಿಧಿಗಳು ಅಥವಾ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿ ಪ್ರಾರಂಭದ ಬಗ್ಗೆ ಭರವಸೆ ನೀಡುವ ತನಕ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭ ಸ್ಥಳಕ್ಕೆ ಆಗಮಿಸಿದ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ, ಪಂಜುರ್ಲಿ ತೋಡಿನ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದ ಬಗ್ಗೆ ಧರಣಿನಿರತರೊಂದಿಗೆ ಚರ್ಚೆ ನಡೆಸಿದರು. ಪಂಜುರ್ಲಿ ತೋಡಿನ ಅಭಿವೃದ್ಧಿಗೆ ಈ ಹಿಂದಿನ ಸರಕಾರ ಮೀಸಲಿಟ್ಟಿದ್ದ ಲಕ್ಷಾಂತರ ರೂ. ಅನುದಾನ ಬಳಕೆ ಯಾಗಿಲ್ಲ. ಪಂಜುರ್ಲಿ ತೋಡಿನಲ್ಲಿ ತ್ಯಾಜದ ದುರ್ನಾತ ಜನಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಗಂಗೊಳ್ಳಿ ಗ್ರಾಮದ ಪ್ರಮುಖ ಚರಂಡಿಗಳ ಮೂಲಕ ಹರಿದು ಬರುವ ನೀರು ಈ ಚರಂಡಿಯ ಮೂಲಕ ನದಿ ಸೇರುತ್ತದೆ. ಇಂತಹ ಪ್ರಮುಖ ಚರಂಡಿ ಇದೀಗ ತ್ಯಾಜ್ಯದ ಕೊಂಪೆಯಾಗಿ ಮಾರ್ಪಟ್ಟಿದೆ ಎಂದು ಧರಣಿನಿರತರು ಆರೋಪಿಸಿದರು.
ಮಳೆಗಾಲದ ಮೊದಲು ಬಿಡುಗಡೆ ಆಗಿರುವ ಅನುದಾನದಿಂದ ಕಾಮಗಾರಿ ಆರಂಭಿಸಬೇಕು ಹಾಗೂ ತುರ್ತು ಸಂದರ್ಭ ದಾರಿಯಿಲ್ಲದೆ ದಿನ ಕಳೆಯುತ್ತಿರುವ ಈ ವಠಾರದ ಜನಸಾಮಾನ್ಯರಿಗೆ ಈ ಚರಂಡಿಯ ಮೇಲೆ ಎರಡು ವಠಾರಕ್ಕೆ ದಾರಿ ಕಲ್ಪಿಸಿಕೊಡಬೇಕೆಂದು ಅವರು ಮನವಿ ಮಾಡಿದರು.
ಗಂಗೊಳ್ಳಿ ಗ್ರಾಪಂ ಪಿಡಿಒ ಉಮಾಶಂಕರ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ್, ಪಂಜುರ್ಲಿ ದೇವಸ್ಥಾನದ ಮೊಕ್ತೇಸರ ಜಿ.ಪುರುಷೋತ್ತಮ ಆರ್ಕಾಟಿ, ಸ್ಥಳೀಯರಾದ ಸೌಪರ್ಣಿಕಾ ಬಸವ ಖಾರ್ವಿ, ಸುರೇಂದ್ರ ಖಾರ್ವಿ, ಸಕು ಉದಯ, ನವೀನ್ ಗಂಗೊಳ್ಳಿ, ಯಶವಂತ ಗಂಗೊಳ್ಳಿ, ದಿಲೀಪ್ ಖಾರ್ವಿ, ಅನಿಲ್ ಸಾಲಿಯಾನ್, ನರಸಿಂಹ ಖಾರ್ವಿ, ಜಿ.ಎನ್.ಸತೀಶ ಖಾರ್ವಿ, ವೆಂಕಟೇಶ, ಗಂಗೊಳ್ಳಿ ಗ್ರಾಪಂ ಸದಸ್ಯ ಬಿ.ಗಣೇಶ ಶೆಣೈ, ಯಶೋಧಾ ಪೂಜಾರಿ, ಶಕುಂತಲಾ ಖಾರ್ವಿ, ಲಲಿತಾ ಪೂಜಾರಿ, ಮಂಜುರಾಜ್, ಗಣೇಶ, ಸುನೀತಾ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಅಧ್ಯಕ್ಷರಿಗೆ ತರಾಟೆ
ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಸ್ಥಳಕ್ಕಾಗಮಿಸಿದ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಅನುದಾನ ಬಿಡುಗಡೆಯಾಗಿ ಇಷ್ಟು ವರ್ಷ ಚರಂಡಿ ಅಭಿವೃದ್ಧಿ ಕೆಲಸ ಆಗಿಲ್ಲ. ಬಿಡುಗಡೆಯಾದ ಅನುದಾನ ಬಳಕೆಯಾಗ ದಿರಲು ಯಾರು ಕಾರಣ, ಅಧಿಕಾರಿಗಳು, ರಾಜಕಾರಣಿಗಳು ಬಂದರೆ ಫೋಟೋ ಫೋಸ್ ಕೊಡಲು ಬರುತ್ತಾರೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಚರಂಡಿ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗದಿರಲು ಈಗಿನ ಸರಕಾರ ಕಾರಣ ಎಂದಾಗ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.