×
Ad

ಮಂಗನಕಾಯಿಲೆ: ಉಡುಪಿಯ ಎರಡೂ ಸ್ಯಾಂಪಲ್ ‘ನೆಗೆಟಿವ್’

Update: 2024-02-26 21:23 IST

ಫೈಲ್‌ ಫೋಟೊ

ಉಡುಪಿ: ಶಂಕಿತ ಮಂಗನಕಾಯಿಲೆ(ಕೆಎಫ್‌ಡಿ)ಗಾಗಿ ಕಳೆದ ಶನಿವಾರ ಪರೀಕ್ಷೆಗಾಗಿ ಕಳುಹಿಸಲಾದ ಇಬ್ಬರು ಜ್ವರಪೀಡಿತ ವ್ಯಕ್ತಿಗಳ ಸ್ಯಾಂಪಲ್‌ಗಳು ಇಂದು ಪರೀಕ್ಷೆಯ ಬಳಿಕ ‘ನೆಗೆಟಿವ್’ ಫಲಿತಾಂಶವನ್ನು ತೋರಿಸಿವೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್ ತಿಳಿಸಿದ್ದಾರೆ.

ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆಗಾಗಿ ಒಟ್ಟು ಮೂರು ಮಂದಿ ಶಂಕಿತರ ಸ್ಯಾಂಪಲ್‌ಗಳನ್ನು ಶಿವಮೊಗ್ಗದ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೆಂಚನೂರಿನ ೫೮ ಪ್ರಾಯದ ಮಹಿಳೆಯೊಬ್ಬರಲ್ಲಿ ಮಾತ್ರ ಸೋಂಕು ಪತ್ತೆಯಾಗಿದ್ದು, ಉಳಿದ ಇಬ್ಬರದು ನೆಗೆಟಿವ್ ಆಗಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಈ ಮಹಿಳೆ ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿ ದ್ದಾರೆ. ಜ್ವರವೂ ಸೇರಿದಂತೆ ಬೇರೆ ಕಾಯಿಲೆಯ ಚಿಕಿತ್ಸೆಗೆ ದಾಖಲಾಗಿದ್ದ ಕುಂದಾಪುರ ನಗರ ಪ್ರದೇಶದ ಮಹಿಳೆ ಉಡು ಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಸ್ಯಾಂಪಲ್ ಪಡೆದ ಮತ್ತೊಬ್ಬರು ಅಜೆಕಾರಿನ 83ರ ಹರೆಯದ ಹಿರಿಯ ನಾಗರಿಕರು ಸಹ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಡಿಎಚ್‌ಓ ತಿಳಿಸಿದ್ದಾರೆ.

ಪಕ್ಕದ ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನಕಾಯಿಲೆ ವ್ಯಾಪಕವಾಗಿರುವ ಹಿನ್ನೆಲೆ ಯಲ್ಲಿ ಜಿಲ್ಲೆಯಲ್ಲೂ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯ ಎಲ್ಲಿಂದಲೂ ಮಂಗಗಳು ಸತ್ತ ವರದಿಗಳಿಲ್ಲ. ಸ್ಯಾಂಪಲ್ ಪಡೆದ ಮೂವರು ವ್ಯಕ್ತಿಗಳು ವಾಸವಾಗಿರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News