ಈ ಬಾರಿ ದೇಶ ಕಟ್ಟುವ ಚುನಾವಣೆ: ಎಂ.ಬಿ.ಭಾನುಪ್ರಕಾಶ್
ಉಡುಪಿ : ಮುಂಬರಲಿರುವ ಲೋಕಸಭಾ ಚುನಾವಣೆ ದೇಶ ಕಟ್ಟುವ ಚುನಾವಣೆಯಾಗಿದೆ. ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು ಎಲ್ಲರನ್ನೂ ಜೊತೆಯಾಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಬೂತ್ ಗೆಲ್ಲಿಸುವ ಗುರಿಯೊಂದಿಗೆ ಪಕ್ಷದ ವಿಜಯ ಯಾತ್ರೆಯನ್ನು ಮುಂದುವರಿಸಲು ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಲೋಕಸಭಾ ಚುನಾವಣಾ ಕರಾವಳಿ-ಮಲೆನಾಡು ಕ್ಲಸ್ಟರ್ ಪ್ರಭಾರಿ ಎಂ.ಬಿ. ಭಾನು ಪ್ರಕಾಶ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಇಂದು ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕೇಂದ್ರದ ಜನಪರ ಯೋಜನೆಗಳನ್ನು ಹಾಗೂ ಸಕಾರಾತ್ಮಕ ವಿಚಾರಗಳನ್ನು ಕಟ್ಟಕಡೆಯ ಮತದಾರರಿಗೂ ತಲುಪಿಸು ವುದು, ಹೊಸ ಯುವ ಮತದಾರರನ್ನು ಬಿಜೆಪಿ ಪರ ಮತದಾನಕ್ಕೆ ಪ್ರೇರೇಪಿಸುವುದು, ಬೂತ್ ಮಟ್ಟದಲ್ಲಿ ಹೊಸ ಕಾರ್ಯಕರ್ತರ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸದೃಢ ಪಕ್ಷ ಸಂಘಟನೆಗೆ ಬದ್ಧತೆಯಿಂದ ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆಯನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ವಹಿಸಿದ್ದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಉಡುಪಿ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಯಾದಿಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾಜಿ.ಸುವರ್ಣ, ಲೋಕಸಭಾ ಚುನಾವಣಾ ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳಾದ ನಯನಾ ಗಣೇಶ್, ರಾಜೇಶ್ ಕಾವೇರಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶ್ಯಾಮಲಾ ಎಸ್.ಕುಂದರ್, ವಿಧಾನಸಭಾ ಕ್ಷೇತ್ರಗಳ ಸಂಚಾಲಕರುಗಳಾದ ಸತೀಶ್ ಪೂಜಾರಿ ಕುಂದಾಪುರ, ಗಿರೀಶ್ ಎಮ್. ಅಂಚನ್ ಉಡುಪಿ, ಮುರಳಿಧರ ಪೈ ಕಾಪು, ಮಣಿರಾಜ್ ಶೆಟ್ಟಿ ಕಾರ್ಕಳ, ಲೋಕಸಭಾ ವಿಸ್ತಾರಕ್ ಧನಂಜಯ್, ವಿಧಾನಸಭಾ ವಿಸ್ತಾರಕ್ ಮೋಹನ್ ಅರಸ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ವಂದಿಸಿದರು.