ಅಖಿಲ ಭಾರತ ಅಂತರ ವಿವಿ ಮಹಿಳಾ ಕ್ರಿಕೆಟ್: ಮೈಸೂರು ವಿವಿ, ಕಲ್ಲಿಕೋಟೆ ವಿವಿ ಶುಭಾರಂಭ
ಮಣಿಪಾಲ: ಭಾರತೀಯ ವಿವಿ ಸಂಘದ ಸಹಯೋಗದೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಇಲ್ಲಿನ ಎಂಡ್ ಪಾಯಿಂಟ್ ಮೈದಾನದಲ್ಲಿ ಯೋಜಿಸಿರುವ 2023-24ನೇ ಸಾಲಿನ ಅಖಿಲ ಭಾರತ ಅಂತರ ವಲಯ ಅಂತರ ವಿವಿ ಮಹಿಳಾ ಕ್ರಿಕೆಟ್ ಟೂರ್ನಿಯ ತಮ್ಮ ಆರಂಭಿಕ ಪಂದ್ಯಗಳಲ್ಲಿ ಮೈಸೂರು ವಿವಿ, ಕಲ್ಲಿಕೋಟೆ ವಿವಿ, ಅಮೃತಸರದ ಗುರುನಾನಕ್ ದೇವ್ ವಿವಿ, ಕೊಲ್ಹಾಪುರದ ಶಿವಾಜಿ ವಿವಿ ಹಾಗೂ ಬಿಹಾರದ ಲಲಿತ್‌ನಾರಾಯಣ್ ಮಿಥಿಲಾ ವಿವಿ ತಂಡಗಳು ಜಯ ದಾಖಲಿಸಿವೆ.
ತನ್ನ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಮೈಸೂರು ವಿವಿ, ಬಿಲಾಸಪುರದ ಅಟಲ್‌ಬಿಹಾರಿ ವಾಜಪೇಯಿ ವಿವಿ ತಂಡವನ್ನು 213 ರನ್‌ಗಳ ಭರ್ಜರಿ ಅಂತರದಿಂದ ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಿವಿ ನಿಗದಿತ ಓವರುಗಳಲ್ಲಿ 2ವಿಕೆಟ್‌ಗೆ 261 ರನ್‌ಗಳಿಸಿದ್ದಲ್ಲದೇ ನಂತರ ವಾಜಪೇಯಿ ವಿವಿಯನ್ನು ಕೇವಲ 48 ರನ್‌ಗಳಿಗೆ ಆಲೌಟ್ ಮಾಡಿತು.
ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕಲ್ಲಿಕೋಟೆ ವಿವಿ, ವೀರ್ ಬಹಾದುರ್ ಸಿಂಗ್ ಪೂರ್ವಾಂಚಲ ವಿವಿಯನ್ನು 9 ವಿಕೆಟ್‌ಗಳಿಗೆ ಹಿಮ್ಮೆಟ್ಟಿಸಿತು. ಎದುರಾಳಿಯನ್ನು 112 ರನ್‌ಗಳಿಗೆ ನಿಯಂತ್ರಿಸಿದ ಕಲ್ಲಿಕೋಟೆ ವಿವಿ ಬಳಿಕ ಒಂದು ವಿಕೆಟ್ ಕಳೆದುಕೊಂಡು ವಿಜಯಿ ರನ್ ಗಳಿಸಿತು.
ಎ ಗುಂಪಿನಲ್ಲಿ ಅಮೃತಸರದ ಜಿಎನ್‌ಡಿಯು ವಿವಿ, ಪುಣೆಯ ಸಾವಿತ್ರಿ ಬಾಯಿ ಪುಲೆ ವಿವಿಯನ್ನು 43ರನ್‌ಗಳಿಂದ ಸೋಲಿಸಿತು.ಮೊದಲು ಬ್ಯಾಟಿಂಗ್ ನಡೆಸಿದ ಗುರುನಾನಕ್ ದೇವ್ ವಿವಿ 115 ರನ್‌ಗಳಿಗೆ ಆಲೌಟಾದರೆ, ಬಳಿಕ ಎದುರಾಳಿ ತಂಡವನ್ನು 72 ರನ್‌ಗಳಿಗೆ ನಿಯಂತ್ರಿಸುವ ಮೂಲಕ ಸುಲಭದ ಜಯ ಗಳಿಸಿತು.
ಸಿ ಗುಂಪಿನ ಪಂದ್ಯಗಳಲ್ಲಿ ಲಲಿತ್‌ನಾರಾಯಣ್ ಮಿಥಿಲಾ ವಿವಿ, ಕೊಟ್ಟಾಯಂನ ಮಹಾತ್ಮಗಾಂಧಿ ವಿವಿಯನ್ನು 25 ರನ್‌ಗಳಿಂದ ಮಣಿಸಿ ಮೊದಲ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ನಡೆಸಿ 5ವಿಕೆಟ್ 94ರನ್‌ಗಳ ಸಾಧಾರಣ ಮೊತ್ತ ಗಳಿಸಿದ ಮಿಥಿಲಾ ವಿವಿ ಬಳಿಕ ಕೊಟ್ಟಾಯಂ ತಂಡವನ್ನು 69 ರನ್‌ಗಳಿಗೆ ಆಲೌಟ್ ಮಾಡಿತು.
ಇದೇ ಗುಂಪಿನ ಎರಡನೇ ಪಂದ್ಯದಲ್ಲಿ ಶಿವಾಜಿ ವಿವಿ, ಪಂಜಾಬ್ ವಿವಿಯನ್ನು 6 ವಿಕೆಟ್‌ಗಳಿಂದ ಸೋಲಿಲಿತು. ಪಂಜಾಬ್ ವಿವಿಯನನು 65 ರನ್‌ಗಳಿಗೆ ನಿಯಂತ್ರಿಸಿದ ಶಿವಾಜಿ ವಿವಿ, ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 66ರನ್ ಗಳಿಸಿ ಜಯಭೇರಿ ಬಾರಿಸಿತು.