ಉಡುಪಿ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣದಲ್ಲಿ; ಡೆಂಗಿ ಪ್ರಕರಣ ಹೆಚ್ಚಳ
ಉಡುಪಿ, ಮೇ 29: ಜನರ ನಿರೀಕ್ಷೆ, ಆತಂಕಗಳ ನಡುವೆ ಮಳೆ ಹಾಗೂ ಮುಂಗಾರು ಜಿಲ್ಲೆಗೆ ಕಾಲಿರಿಸಲು ಕ್ಷಣಗಣನೆ ಪ್ರಾರಂಭಗೊಳ್ಳುತಿದ್ದಂತೆ ಆರೋಗ್ಯ ಇಲಾಖೆಯ ತಲೆನೋವು ಹೆಚ್ಚತೊಡಗಿದೆ. ಮಳೆಯೊಂದಿಗೆ ವ್ಯಾಪಕವಾಗಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸನ್ನದ್ಧಗೊಳ್ಳತೊಡಗಿದೆ. ಮುಖ್ಯವಾಗಿ ಸೊಳ್ಳೆ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನೀಲನಕ್ಷೆ ತಯಾರಿಸಿ ಕಾರ್ಯೋನ್ಮುಖವಾಗಿದೆ.
ಮಳೆಗಾಲದ ಪ್ರಾರಂಭದೊಂದಿಗೆ ಕರಾವಳಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳಲ್ಲಿ ಮಲೇರಿಯಾ ಹಾಗೂ ಡೆಂಗಿಗೆ ಅಗ್ರಸ್ಥಾನ. ಉಳಿದಂತೆ ಚಿಕುನ್‌ಗುನ್ಯಾ ಹಾಗೂ ಮೆದುಳು ಜ್ವರ ರೋಗಗಳೂ ಅಲ್ಲಲ್ಲಿ ಕಾಣಿಸಿಕೊಂಡು ಜನರನ್ನು ಮಳೆಗಾಲದುದ್ದಕ್ಕೂ ಕಾಡುತ್ತಿರುತ್ತವೆ. ಜನರ ಆರೋಗ್ಯದ ಕಾಳಜಿ ವಹಿಸುವ ಇಲಾಖೆಗೂ ತಲೆನೋವಾಗಿ ಪರಿಣಮಿಸುತ್ತದೆ. ಸದ್ಯ ಡೆಂಗಿ ಮಾತ್ರ ವ್ಯಾಪಕವಾಗಿದ್ದರೆ ಉಳಿದವು ಹೆಚ್ಚುಕಮ್ಮಿ ಸಂಪೂರ್ಣ ನಿಯಂತ್ರಣದಲ್ಲಿವೆ ಎಂದು ಉಡುಪಿ ಜಿಲ್ಲಾ ರೋಗವಾಹನ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಹೇಳುತ್ತಾರೆ.
ಕರಾವಳಿ ಭಾಗದಲ್ಲಿ ಪ್ರತಿ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ, ಒಂದು ಕಾಲದಲ್ಲಿ ನಿಯಂತ್ರಣ ಮೀರಿ ವ್ಯಾಪಿಸುತಿದ್ದ ಮಲೇರಿಯಾವನ್ನು ಹಲವು ಕಾರ್ಯಕ್ರಮಗಳ ಮೂಲಕ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಈ ವರ್ಷ ಇದುವರೆಗೆ ಮಲೇರಿಯಾದ ಕೇವಲ ಒಂದು ಪ್ರಕರಣ ಮಾತ್ರ ವರದಿಯಾಗಿದೆ. ಅದೂ ಬಾಗಲಕೋಟೆಯ ಕಟ್ಟಡ ಕಾರ್ಮಿಕನಲ್ಲಿ. ಇಲಾಖೆಯ ಸಮರೋಪಾದಿ ಚಟುವಟಿಕೆಗಳಿಂದಾಗಿ ಮಲೇರಿಯಾ ರೋಗ ಈಗ ಜಿಲ್ಲೆಯಲ್ಲಿ ಸಂಪೂರ್ಣ ನಿವಾರಣೆಯ ಹಂತದಲ್ಲಿದ್ದು 2025ರ ವೇಳೆಗೆ ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ ಯನ್ನು ತಲುಪುವ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
2012ರಲ್ಲಿ ಮಲೇರಿಯಾದ 2217 ಪ್ರಕರಣಗಳು ಜಿಲ್ಲೆಯಿಂದ ವರದಿ ಯಾಗಿದ್ದರೆ, 2014ರಲ್ಲಿ ಇದು 1639ಕ್ಕೆ ಇಳಿದಿತ್ತು. 2017ರಲ್ಲಿ ಮೊದಲ ಬಾರಿ ಮಲೇರಿಯಾ ಪ್ರಕರಣ ಸಾವಿರದಿಂದ ಕೆಳಗಿಳಿದಿತ್ತು. ಆ ವರ್ಷ 513 ಇದ್ದ ಪ್ರಕರಣ, 2018ರಲ್ಲಿ 221ಕ್ಕೆ 2019ರಲ್ಲಿ 150ಕ್ಕೆ ಹಾಗೂ 2020ರಲ್ಲಿ 124ಕ್ಕೆ ಇಳಿದಿತ್ತು. ಇಲಾಖೆಯ ಸತತ ಸಂಘಟಿತ ಪ್ರಯತ್ನ ದಿಂದ 2021ರಲ್ಲಿ ಜಿಲ್ಲೆಯಲ್ಲಿ ಕೇವಲ 29 ಮಲೇರಿಯಾ ಪ್ರಕರಣ ವರದಿಯಾಗಿತ್ತು. 2022ರಲ್ಲಿ 18, 2023ರಲ್ಲಿ 16 ಪ್ರಕರಣಗಳು ಮಾತ್ರ ವರದಿಯಾಗಿದ್ದವು.
ನಿಯಂತ್ರಣಕ್ಕೆ ಬರದ ಡೆಂಗಿ: ಆದರೆ ಡೆಂಗಿ ರೋಗವನ್ನು ನಿಯಂತ್ರಿಸುವ ನಮ್ಮ ಪ್ರಯತ್ನ ಅದರ ರೋಗ ಸ್ವರೂಪದಿಂದ ಹೆಚ್ಚಿನ ಸಫಲತೆ ಪಡೆದಿಲ್ಲ. ಡೆಂಗಿಯ ನಿಯಂತ್ರಣದಲ್ಲಿ ನಮ್ಮ ಪ್ರಯತ್ನಗಳೊಂದಿಗೆ ಜನರ ಸಹಕಾರವೂ ನಮಗೆ ಅಷ್ಟೇ ಮುಖ್ಯವಾಗುತ್ತದೆ. ಡೆಂಗಿ ಕುರಿತು ಸಂಪೂರ್ಣ ಅರಿವು, ಜಾಗೃತ ಜನತೆ ನಮ್ಮ ಪ್ರಯತ್ನಗಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಡಾ.ಪ್ರಶಾಂತ್ ಭಟ್ ನುಡಿದರು.
2013ರಲ್ಲಿ ಜಿಲ್ಲೆಯಲ್ಲಿ 240 ಡೆಂಗಿ ರೋಗದ ಪ್ರಕರಣ ದಾಖಲಾಗಿತ್ತು. 2014ರಲ್ಲಿ 130ಕ್ಕೆ ಇಳಿದ ಪ್ರಕರಣ 2015ರಲ್ಲಿ 331ಕ್ಕೇರಿತು. 2016ರಲ್ಲಿ ಅದು ಸರ್ವಾಧಿಕ ಗರಿಷ್ಠ 600ಕ್ಕೆ ನೆಗೆಯಿತಲ್ಲದೇ ರೋಗದಿಂದ ಒಂದು ಮರಣವೂ ವರದಿಯಾ ಯಿತು. 2017ರಲ್ಲಿ 383, 2018ರಲ್ಲಿ 228, 2019ರಲ್ಲಿ 280, 2020ರಲ್ಲಿ 139 ಹಾಗೂ 2021ರಲ್ಲಿ 380 ಪ್ರಕರಣಗಳು ಜಿಲ್ಲೆಯ ವಿವಿದೆಡೆಗಳಿಂದ ವರದಿಯಾದವು.
2022ರ ಬಳಿಕ ಈ ರೋಗ ಹೆಚ್ಚು ವ್ಯಾಪಕತೆಯನ್ನು ಕಾಣುತ್ತಿದೆ. ಆ ವರ್ಷ 513 ಮಂದಿಯಲ್ಲಿ ರೋಗ ಕಾಣಿಸಿಕೊಂಡಿ ತ್ತಲ್ಲದೇ ಇಬ್ಬರು ಅದಕ್ಕೆ ಬಲಿಯಾದರು. 2023ರಲ್ಲಿ ಮತ್ತೆ 635 ಮಂದಿ ಡೆಂಗಿಗೆ ತುತ್ತಾದರೆ ಇವರಲ್ಲಿ ಇಬ್ಬರು ರೋಗಕ್ಕೆ ಬಲಿಯಾದರು. ಈ ವರ್ಷವೂ ಮೇ 27ರವರೆಗೆ ಒಟ್ಟು 89 ಪ್ರಕರಣಗಳು ವರದಿಯಾಗಿವೆ. ಡೆಂಗಿ ರೋಗದ ಒಂದು ವೈಶಿಷ್ಟ್ಯವೆಂದರೆ ಇದರ ವ್ಯಾಪಕತೆ. ವಿವಿಧ ಚಟುವಟಿಕೆಗಳು ಹೆಚ್ಚು ನಡೆಯುವ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅತ್ಯ ಧಿಕ ಪ್ರಮಾಣದಲ್ಲಿ ಪ್ರಕರಣಗಳು ವರದಿಯಾಗುತಿದ್ದರೂ, ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲೂ ಒಂದೆರಡು ಪ್ರಕರಣಗಳು ವರದಿಯಾಗುತ್ತಿವೆ.
ಈವರೆಗೆ ದಾಖಲಾಗಿರುವ 89 ಪ್ರಕರಣಗಳಲ್ಲಿ ಮೂರನೇ ಒಂದು ಭಾಗ ಉಡುಪಿ ತಾಲೂಕಿನಿಂದಲೇ ವರದಿಯಾಗಿವೆ. ಉಡುಪಿ ತಾಲೂಕಿನಿಂದ 57, ಕಾರ್ಕಳದಿಂದ 14 ಹಾಗೂ ಕುಂದಾಪುರ ತಾಲೂಕಿನಿಂದ 18 ಪ್ರಕರಣಗಳು ವರದಿಯಾ ಗಿವೆ. ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಅತ್ಯಧಿಕ 12 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಉಡುಪಿ ನಗರ, ಕಾಪು, ಕೊಲ್ಲೂರು, ಕುಕ್ಕೆಹಳ್ಳಿ ಪಿಎಚ್‌ಸಿ ವ್ಯಾಪ್ತಿಯಲ್ಲಿ ತಲಾ ಆರು ಪ್ರಕರಣಗಳು ಕಂಡುಬಂದಿವೆ.
ಮಲ್ಪೆಯಲ್ಲಿ 5, ಹಿರೇಬೆಟ್ಟು 4, ಅಜೆಕಾರು, ಗಂಗೊಳ್ಳಿ, ಕೆಮ್ಮಣ್ಣು ಹಾಗೂ ಸಿದ್ಧಾಪುರ ಪಿಎಚ್‌ಸಿಯಿಂದ ತಲಾ ಮೂರು ಪ್ರಕರಣಗಳು ವರದಿಯಾಗಿವೆ. ಒಟ್ಟಿನಲ್ಲಿ ಜಿಲ್ಲೆಯ ಹೆಚ್ಚು ಕಡಿಮೆ ಎಲ್ಲಾ ಪಿಎಚ್‌ಸಿಯ ವ್ಯಾಪ್ತಿಯಲ್ಲೂ ಕನಿಷ್ಠ ಒಂದು ಪ್ರಕರಣಗಳು ಕಂಡುಬಂದಿವೆ ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದರು.
ಇನ್ನುಳಿದಂತೆ ಚಿಕುನ್‌ಗುನ್ಯಾ ಈ ವರ್ಷ ಕೇವಲ ಒಂದು ಪ್ರಕರಣ ವರದಿಯಾಗಿದೆ. 2021, 2022ರಲ್ಲಿ ತಲಾ 10 ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷ 18 ಪ್ರಕರಣ ಕಂಡುಬಂದಿತ್ತು. ಮೆದುಳು ಜ್ವರ ಇದುವರೆಗೆ ಜಿಲ್ಲೆಯ ಎಲ್ಲೂ ಕಂಡುಬಂದಿಲ್ಲ. 2022ರಲ್ಲಿ ಎರಡು ಹಾಗೂ 2023ರಲ್ಲಿ ಒಂದು ಪ್ರಕರಣ ವರದಿಯಾಗಿದ್ದು, 2022ರಲ್ಲಿ ಜಿಲ್ಲೆಯ ಒಬ್ಬರು ಮೆದುಳು ಜ್ವರದಿಂದ ಮೃತಪಟ್ಟಿದ್ದರು.
ಮಳೆ ಹುಯ್ಯಲಿ... ಸೊಳ್ಳೆ ಮೊಟ್ಟೆ ಕೊಚ್ಚಿ ಹೋಗಲಿ...
ಹೆಚ್ಚಿನೆಲ್ಲಾ ರೋಗಗಳು ಮಳೆಗಾಲದಲ್ಲೇ ಅಥವಾ ಮಳೆ ಸುರಿಯಲು ಪ್ರಾರಂಭಿಸಿದ ಬಳಿಕವೇ ಕಾಣಿಸಿಕೊಳ್ಳುತ್ತವೆ. ಸೊಳ್ಳೆ ಈ ರೋಗಗಳ ವೈರಸ್‌ನ ಪ್ರಧಾನ ವಾಹಕವಾಗಿರುತ್ತವೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣ ಈ ಸಾಂಕ್ರಾಮಿಕದ ನಿರ್ಮೂಲನೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದಕ್ಕಾಗಿ ಮನೆಯ ಸುತ್ತಮುತ್ತ ಎಲ್ಲೂ, ಯಾವುದೇ ವಸ್ತುಗಳಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸುವುದೇ ಸೊಳ್ಳೆ ನಿವಾರಣೆ ಇರುವ ಸುಲಭದ ಉಪಾಯ.
ಆದರೆ ಡೆಂಗಿ ವೈರಸ್ ಸಾಂಕ್ರಾಮಿಕವಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಡೆಂಗಿ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವುದೇ ಈಡಿಸ್ ಸೊಳ್ಳೆಗಳು ಮನುಷ್ಯನನ್ನು ಕಚ್ಚುವ ಮೂಲಕ.ಅಂದರೆ ರೋಗಕಾರಕದಿಂದ ಹರಡುವ ಡೆಂಗಿ ವೈರಸ್ ಸೋಂಕು, ಈ ಹಿಂದೆ ಸೋಂಕಿತ ವ್ಯಕ್ತಿಯನ್ನು ಕಚ್ಚಿದ ಈಡಿಸ್ ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಹರಡುತ್ತದೆ.
ಡೆಂಗಿ ವೈರಸ್ ವೈಶಿಷ್ಯತೆ ಎಂದರೆ ಸೊಳ್ಳೆಯೊಂದು ಇಡುವ ಪ್ರತಿ ಮೊಟ್ಟೆಯಲ್ಲೂ ಸ್ಥಾನಪಡೆದಿರುವುದು. ಸೊಳ್ಳೆಯೊಂದು 500 ಮೊಟ್ಟೆ ಇಟ್ಟರೆ ಎಲ್ಲಾ ಮೊಟ್ಟೆಗಳಲ್ಲೂ ಡೆಂಗಿ ವೈರಸ್ ಇರುತ್ತದೆ. ಮತ್ತೆ ಅದು ವರ್ಷಗಳವರೆಗೆ ಜೀವಂತವಾಗಿ ರುತ್ತದೆ. ನೀರ ಹನಿ ಸ್ಪರ್ಶವಾದರೂ ಅದು ಸಕ್ರಿಯಗೊಳ್ಳುತ್ತದೆ. ಮಳೆ ಬಿದ್ದೊಡನೆ ಪ್ರವರ್ದಮಾನಕ್ಕೆ ಬರುವ ಸೊಳ್ಳೆ ನೀರು ತುಂಬಿದ ಹೂವಿನ ಕುಂಡ, ಪ್ಲಾಸ್ಟಿಕ್ ಚೀಲ, ಚಿಪ್ಪು, ಟಯರ್, ಟ್ಯೂಬ್, ಕ್ಯಾನ್‌ಗಳಲ್ಲಿ ವರ್ಷಪೂರ್ತಿ ಸಂತಾನೋ ತ್ಪತ್ತಿ ಮಾಡಬಹುದು. ಒಂದೇ ಒಂದು ಸೊಳ್ಳೆ ಕಡಿತ ರೋಗಕ್ಕೆ ಕಾರಣವಾಗಬಹುದು.
ಹೀಗಾಗಿ ಹನಿ ಮಳೆ, ಜಿಟಿ ಜಿಟಿ ಮಳೆಯಿಂದ ಸೊಳ್ಳೆ ಮೂಲಕ ಡೆಂಗಿ ಹರಡುವ ಅಪಾಯ ಹೆಚ್ಚಿರುತ್ತದೆ. ಆದೇ ಕೆಲವು ದಿನಗಳ ಕಾಲ ಸುರಿಯುವ ಝೀರಾಪಟ್ಟಿ ಮಳೆ, ಮಳೆಯಿಂದ ಉಂಟಾಗುವ ನೆರೆಯಿಂದ ಸೊಳ್ಳೆಯ ಮೊಟ್ಟೆಗಳೆಲ್ಲ ಕೊಚ್ಚಿ ಕೊಂಡು ಹೋಗಿ ಸಮುದ್ರ ಸೇರಿ ರೋಗ ನಿಯಂತ್ರಣ ಕ್ಕೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸದಾಗಿ ಉತ್ಪತ್ತಿಯಾಗುವ ಸೊಳ್ಳೆ ಯಲ್ಲಿ ಡೆಂಗಿ ವೈರಸ್ ಇಲ್ಲದೇ ಇರುವುದರಿಂದ ರೋಗದ ಅಪಾಯ ಅಷ್ಟಿರುವುದಿಲ್ಲ.
ಹೀಗಾಗಿ ನಿಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವ ಮೂಲಕ, ಎಲ್ಲೂ ನೀರು ನಿಲ್ಲದಂತೆ ಜಾಗೃತೆ ವಹಿಸುವ ಮೂಲಕ ಡೆಂಗಿ ಜ್ವರದಿಂದ ಬಚಾವಾಗಬಹುದು ಎಂದು ಡಾ.ಭಟ್ ತಿಳಿಸಿದರು.
‘ಡೆಂಗಿ ಜ್ವರದ ನಿಯಂತ್ರಣದಲ್ಲಿ ಜನತೆಯ ಸಹಕಾರ ಇಲಾಖೆಗೆ ಸಿಗಬೇಕು. ರೋಗದ ಬಗ್ಗೆ ಅವರಿಗೆ ಅರಿವಿರಬೇಕು. ಅವರು ಸಾಕಷ್ಟು ಜಾಗೃತಿ ವಹಿಸಬೇಕು. ಸೊಳ್ಳೆ ಆಶ್ರಯ ಪಡೆದು ಮೊಟ್ಟೆ ಇಡದಂತೆ ಪರಿಸರವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು. ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಳೆ ಪ್ರಾರಂಭವಾಗುತಿದ್ದಂತೆ ಸೊಳ್ಳೆಗಳಿಂದ ಈ ರೋಗ ಹರಡುವುದರಿಂದ ವಿಶೇಷ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು.’
-ಡಾ.ಪ್ರಶಾಂತ್ ಭಟ್, ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ.